ಉಡುಪಿಯಲ್ಲಿ ಶ್ರವಣದೋಷ ಮಕ್ಕಳ ವಿಶೇಷ ವಸತಿ ಶಾಲೆ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವ: ಡಿಸಿ ವಿದ್ಯಾಕುಮಾರಿ
ಉಡುಪಿ, ಅ.26: ಉಡುಪಿ ಜಿಲ್ಲೆಯ ಶ್ರವಣ ದೋಷ ಇರುವ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮಂಜೂ ರಾತಿ ಸಂಖ್ಯೆ ಹೆಚ್ಚಿಸಲು ಅಥವಾ ಹೊಸ ಶಾಲೆ ಆರಂಭಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಿವುಡರ ಕ್ಷೇಮಾಭಿವೃದ್ಧಿ ಸಂಘದ 10ನೇ ವಾರ್ಷಿಕ ಸಂಭ್ರಮವನ್ನು ಶನಿವಾರ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ 403 ಮಂದಿ ಕಿವಿ ಮತ್ತು ಬಾಯಿ ಬಾರದವರು ಹಾಗೂ 1750 ಮಂದಿ ಮಾತನಾಡಿದರೂ ಕಿವಿ ಕೇಳದೆ ಇರುವವರಿದ್ದಾರೆ. ಸದ್ಯ ಜಿಲ್ಲೆಯಲ್ಲಿರುವ ಶ್ರವಣದೋಷ ಇರುವ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ಕೇವಲ 40 ಮಕ್ಕಳ ದಾಖಲಾತಿಗೆ ಮಾತ್ರ ಅವಕಾಶ ಇರುವುದು. ಇದರಿಂದ ಉಳಿದ ಮಕ್ಕಳು ಸಾಮಾನ್ಯ ಶಾಲೆಗೆ ಹೋಗುತ್ತಿದ್ದಾರೆ. ಹಾಗಾಗಿ ಹೆಚ್ಚಿನ ಶ್ರವಣ ದೋಷ ಇರುವ ಮಕ್ಕಳು ಸಮರ್ಪಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಎಲ್ಲ ಅರ್ಹ ಮಕ್ಕಳು ವಿಶೇಷ ಶಾಲೆಯಲ್ಲಿ ಕಲಿಯುವುದರಿಂದ ಅವರಲ್ಲಿ ಆತ್ಮವಿಶ್ವಾಸ ಬೆಳೆದು ಸಮಾಜದ ಜೊತೆ ಬೆರೆ ಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದ ಅವರು, ಇದು ವಿಜ್ಞಾನ ಬಹಳಷ್ಟು ಮುಂದು ವರೆದಿದ್ದು, ಪೋಷಕರು ತಮ್ಮ ಮಕ್ಕಳ ಸಮಸ್ಯೆಯನ್ನು ಬಾಲ್ಯ ದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಕಾರ್ಯ ಮಾಡ ಬೇಕು. ಇದರಿಂದ ಆ ಮಕ್ಕಳಲ್ಲಿನ ತೊಂದರೆಗಳನ್ನು ಸರಿಪಡಿಸಬಹುದಾಗಿದೆ ಎಂದರು.
ತಮ್ಮಲ್ಲಿರುವ ತೊಂದರೆಗಳನ್ನು ಮೆಟ್ಟಿ ನಿಂತು ಜೀವನವನ್ನು ಪ್ರೀತಿಸಿ ಬದುಕುವುದು ಬಹಳ ಮುಖ್ಯವಾಗಿದೆ. ಯಾವುದೇ ತೊಂದರೆ ಇದ್ದರೂ ಅದನ್ನು ಸಾವಲಾಗಿ ತೆಗೆದುಕೊಂಡು ನಮ್ಮೊಳಗಿನ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿದರೆ ಸಾಮಾ ನ್ಯರ ರೀತಿಯಲ್ಲಿ ಬದುಕಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಉಡುಪಿ ವಿಕಲಚೇತನರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಇಲಾಖೆಯ ಕಲ್ಯಾಣಾಧಿಕಾರಿ ರತ್ನ ಸುವರ್ಣ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಉಡುಪಿ ಶೋಕಾ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ರೆ.ಫಾ. ಚಾರ್ಲ್ಸ್ ಮೆನೆಜಸ್, ಉಡುಪಿ ನಗರಸಭೆ ಸದಸ್ಯ ವಿಜಯ ಕೊಡವೂರು ಮಾತನಾಡಿದರು.
ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ಕಡೂರು ಗೌರವಾಧ್ಯಕ್ಷ ಕೆ.ಎಚ್.ಶಂಕರ್, ಅಧ್ಯಕ್ಷ ಕೆ.ಎಸ್. ಉಮಾಶಂಕರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ದೇವರಾಜ್, ಅಖಿಲ ಭಾರತ ಕಿವುಡರ ಕ್ರೀಡಾ ಮಂಡಳಿ ನವದೆಹಲಿ ಅಧ್ಯಕ್ಷ ಕುಮಾರ್ ವಿ., ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ ಬೆಂಗಳಲೂರು ಪ್ರಧಾನ ಕಾರ್ಯದರ್ಶಿ ಜಿ.ಎಸ್.ನವೀನ್ ಕುಮಾರ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಅಂಪಾರು ಮೂಡುಬಗೆಯ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲಾ ಮುಖ್ಯೋಪಾಧ್ಯಾಯ ರವೀಂದ್ರ ಎಚ್. ಮುಖ್ಯ ಅತಿಥಿಗಳಾಗಿದ್ದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಜೆಸ್ಲಿನ್ ಲೆವಿಸ್, ಅಧ್ಯಕ್ಷ ಅರವಿಂದ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಯೋಗರಾಜ್ ಶೆಟ್ಟಿ ಹುಂಚನಿ ಉಪಸ್ಥಿತರಿದ್ದರು. ಸಲಹೆಗಾರರಾದ ಶೋಭಿತಾ ವಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶೇಷ ಶಿಕ್ಷಕಿ ಪ್ರಮೀಳಾ ಅತಿಥಿಗಳ ಭಾಷಣವನ್ನು ಕಿವುಡರಿಗೆ ಅರ್ಥೈಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.