×
Ad

ಸಹಕಾರ ಕ್ಷೇತ್ರದಿಂದ ದೇಶದ ಆರ್ಥಿಕ ವ್ಯವಸ್ಥೆ ಬದಲಾವಣೆ ಸಾಧ್ಯ: ಜಯಕರ ಶೆಟ್ಟಿ ಇಂದ್ರಾಳಿ

Update: 2024-10-28 18:14 IST

ಉಡುಪಿ: ಇಡೀ ದೇಶದ ಆರ್ಥಿಕ ವ್ಯವಸ್ಥೆ ಬದಲಾವಣೆ ಮಾಡುವ ಸಾಮರ್ಥ್ಯ ಇರುವುದು ಸಹಕಾರಿ ಕ್ಷೇತ್ರಕ್ಕೆ ಮಾತ್ರ. ದೇಶದ ಒಟ್ಟು ಜನಸಂಖ್ಯೆಯ ಶೇ.40ರಷ್ಟು ಜನ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಸಹಕಾರಿಗಳು ಒಗ್ಗಟ್ಟಾಗಬೇಕು. ಕ್ಷೇತ್ರದ ಅನೇಕ ಸಮಸ್ಯೆಗಳು ಹಾಗೂ ತಿದ್ದುಪಡಿ ಬಗ್ಗೆ ಸರಕಾರ ಗಮನಕ್ಕೆ ತರಬೇಕು. ಆ ಮೂಲಕ ಸಹಕಾರ ಕ್ಷೇತ್ರವನ್ನು ಬಲ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಹಾಗೂ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು/ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಉಡುಪಿ ಬಡಗಬೆಟ್ಟು ಸೊಸೈಟಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ 47 ಸಾವಿರ ಸಹಕಾರ ಸಂಸ್ಥೆಯನ್ನು ಹೊಂದಿದೆ. ಲಾಭ ಗಳಿಸಿದ ಸಹಕಾರಿ ಸಂಸ್ಥೆಗಳು ಸಹಕಾರ ಶಿಕ್ಷಣಕ್ಕಾಗಿ ಶೇ.2ರಷ್ಟು ಹಣ ಮಹಾಮಂಡಲಕ್ಕೆ ನೀಡುತ್ತಿದೆ. ಅದನ್ನು ರಾಜ್ಯಾದ್ಯಂತ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಶಿಕ್ಷಣ, ಪ್ರಚಾರ ಹಾಗೂ ತರಬೇತಿಗೆ ವಿನಿಯೋಗಿಸಲಾಗುತ್ತದೆ ಎಂದರು.

ವೇದಿಕೆಯಲ್ಲಿ ಯೂನಿಯನ್ ಆಡಳಿತ ಮಂಡಳಿ ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ಹರೀಶ್ ಕಿಣಿ, ಕೊರಗ ಪೂಜಾರಿ, ಮನೋಜ್ ಎಸ್.ಕರ್ಕೇರ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ತರಬೇತಿಯಲ್ಲಿ ಉಡುಪಿ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮಾನೇಜ್‌ಮೆಂಟ್‌ನ ಹಿರಿಯ ಪ್ರಾಧ್ಯಾಪಕ ಪ್ರೊ.ಎಂ.ಜೈಕಿಶನ್ ಭಟ್ ‘ಮಾನವ ಕೌಶಲ್ಯ ಅಭಿವೃದ್ಧಿ’ ಹಾಗೂ ಸಾಲಿಗ್ರಾಮ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಶ್ರೀಧರ ಸೋಮಯಾಜಿ ‘ಸಹಕಾರ ಸಂಘಗಳ ಕಾಯಿದೆ’ ಕುರಿತು ಉಪನ್ಯಾಸ ನೀಡಿದರು.

‘ಸಪ್ತಾಹದಲ್ಲಿ 5 ಸಾವಿರ ವಿದ್ಯಾರ್ಥಿಗಳು’

ಈ ವರ್ಷ ನ.14-20ರವರೆಗೆ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಸಪ್ತಾಹ ಆಚರಿಸಲು ಉದ್ದೇಶಿಸ ಲಾಗಿದೆ. ಯುವ ಜನತೆ ಇಂದು ಸಹಕಾರಿ ಕ್ಷೇತ್ರಗಳ ಬಗ್ಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಈ ವರ್ಷದ ಸಪ್ತಾಹದಲ್ಲಿ ಒಂದು ದಿನವನ್ನು ಯುವ ಜನಾಂಗ, ವಿದ್ಯಾರ್ಥಿಗಳಿಗೆ ಮೀಸಲಿಡಲು ಚಿಂತಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಕನಿಷ್ಠ 5ಸಾವಿರ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News