×
Ad

ವಿದ್ಯಾಪೋಷಕ್ ವಿದ್ಯಾರ್ಥಿನಿಯ ಮನೆಗೆ ಶಿಲಾನ್ಯಾಸ

Update: 2024-10-28 21:11 IST

ಉಡುಪಿ, ಅ.28: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ನ ವಿದ್ಯಾರ್ಥಿನಿ ಮೂರನೇ ವರ್ಷದ ಇಂಜಿನಿಯರಿಂಗ್ ಕಲಿಯುತ್ತಿರುವ ಸೌಜನ್ಯಾ ಇವಳಿಗೆ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದಲ್ಲಿ ನಿರ್ಮಿಸಲಿರುವ ಮನೆಗೆ ಸೋಮವಾರ ಶಿರ್ವದ ಹಿರಿಯ ಸಾಮಾಜಿಕ ಕಾರ್ಯಕರ್ತ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಇಂದು ತಮ್ಮ 60ನೇ ಜನ್ಮದಿನವನ್ನು ಆಚರಿಸಿದ ರವೀಂದ್ರ ಅವರು ಇದರ ಪ್ರಯುಕ್ತ ಓರ್ವ ಪ್ರತಿಭಾನ್ವಿತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿಕೊಟ್ಟು ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪಿಸಿದ್ದು, ಅದರಂತೆ ಇಂದು ಶಿಲಾನ್ಯಾಸ ನೆರವೇರಿದೆ. ಇನ್ನೆರಡು ತಿಂಗಳಲ್ಲಿ ಈ ಮನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ತಿಳಿಸಿದ್ದಾರೆ.

ಆರು ತಿಂಗಳ ಹಿಂದೆ ತಂದೆಯನ್ನು ಕಳೆದುಕೊಂಡ ಸೌಜನ್ಯಾಳಿಗೆ ಪಂಚಾಯತ್ ನೀಡಿದ 2.5 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಿ ಕೊಡಲಾಗು ವುದು ಎಂದು ಕಾರ್ಯದರ್ಶಿ ಮುರಲಿ ಕಡೆಕಾರ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ರವೀಂದ್ರ ಶೆಟ್ಟಿ ಅವರ ಪತ್ನಿ ಸುಕನ್ಯಾ, ಪುತ್ರ ವರುಣ್ ಶೆಟ್ಟಿ, ಸಂಸ್ಥೆಯ ಸದಸ್ಯರಾದ ವೇದಮೂರ್ತಿ ಸೀತಾರಾಮ ಭಟ್, ಆರೂರು ಗ್ರಾಪಂ ಅಧ್ಯಕ್ಷ ಗುರುರಾಜ ರಾವ್, ಮಾಜಿ ಅಧ್ಯಕ್ಷ ರಾಜು ಕುಲಾಲ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ.ಶೆಟ್ಟಿ, ಸದಸ್ಯರಾದ ಗಣೇಶ್ ಬ್ರಹ್ಮಾವರ ಹಾಗೂ ಸೌಜನ್ಯಾಳ ತಾಯಿ ಪ್ರೇಮಾ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News