×
Ad

ಅಂಗನವಾಡಿ ಹುದ್ದೆ: ಅರ್ಜಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶ

Update: 2024-12-25 20:34 IST

ಉಡುಪಿ, ಡಿ.25: ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕುಂದಾಪುರ ಹಾಗೂ ಕಾರ್ಕಳ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ ಒಟ್ಟು 57 ಅಂಗನವಾಡಿ ಕಾರ್ಯಕರ್ತೆ ಹಾಗೂ 136 ಅಂಗನವಾಡಿ ಸಹಾಯಕಿಯರ ಗೌರವಸೇವೆ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

ಪ್ರಸ್ತುತ ಅರ್ಜಿ ಸಲ್ಲಿಸುವ ಕಾಲಾವಧಿ ಮುಗಿದಿದ್ದು, ಅರ್ಜಿ ಸಲ್ಲಿಸುವಾಗ ವೆಬ್‌ಸೈಟ್‌ನಲ್ಲಿ ಒಟ್ಟು 4 ವಿವಿಧ ಹಂತಗಳಿದ್ದು, ಇದರಲ್ಲಿ ಕೆಲವು ಅರ್ಜಿದಾರ ರಿಗೆ ಒಂದನೇ ಹಂತದಲ್ಲಿಯೇ ‘ಅರ್ಜಿಯನ್ನು ಯಶಸ್ವಿಯಾಗಿ ಅಪ್‌ಲೋಡ್ ಆಗಿದೆ.’ ಎಂಬ ಸಂದೇಶ ಅವರುಗಳ ಮೊಬೈಲ್‌ಗೆ ಸ್ವೀಕೃತವಾಗಿರುವುದರಿಂದ ಅವರು ತಮ್ಮ ಅರ್ಜಿಗಳನ್ನು ಪೂರ್ಣಗೊಳಿಸಿಲ್ಲ.

ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 400 ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ 156 ಅಪೂರ್ಣ ಅರ್ಜಿಗಳು ಸ್ವೀಕೃತವಾಗಿವೆ. ಅರ್ಜಿ ಸಲ್ಲಿಸುವ 4 ಹಂತಗಳನ್ನು ಪೂರ್ಣಗೊಳಿಸದೇ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಡಿ. 26ರಿಂದ 2025ರ ಜನವರಿ 5ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ವೆಬ್‌ಸೈಟ್ ನಲ್ಲಿ ಇಲಾಖಾ ವತಿಯಿಂದಲೇ ಅವಕಾಶ ನೀಡಿ ಸರಕಾರ ಆದೇಶ ಹೊರಡಿಸಿದೆ.

ಅಭ್ಯರ್ಥಿಗಳು ಅರ್ಜಿಯನ್ನು ಒಂದನೇ ಹಂತ- ಆನ್‌ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡುವುದು, ಎರಡನೇ ಹಂತ- ತಮ್ಮ ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡುವುದು, ಮೂರನೇ ಹಂತ - ತಮ್ಮ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಹಾಗೂ ನಾಲ್ಕನೇ ಹಂತ- ತಮ್ಮ ಆಧಾರ್ ಸಂಖ್ಯೆ ನಮೂದಿಸಿ, ಇ-ಹಸ್ತಾಕ್ಷರದೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಬೇಕು.

ಅಪೂರ್ಣವಾದ ಅರ್ಜಿಗಳ ಅರ್ಜಿ ಸಂಖ್ಯೆ ಹಾಗೂ ಇತರೆ ವಿವರಗಳನ್ನೊಳಗೊಂಡ ಮಾಹಿತಿಯು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News