×
Ad

ಕುಂದಾಪುರ: ಸಾವಿರಾರು ಮಂದಿಯಿಂದ ಅನೂಪ್ ಪೂಜಾರಿ ಪಾರ್ಥಿವ ಶರೀರ ಅಂತಿಮ ದರ್ಶನ

Update: 2024-12-26 17:04 IST

ಕುಂದಾಪುರ: ಡಿ.24ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನ ರಸ್ತೆಯಿಂದ ಕಣಿವೆಗೆ ಉರುಳಿದ ಘಟನೆಯಲ್ಲಿ ಮೃತರಾದ ಯೋಧ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಅನೂಪ್ ಪೂಜಾರಿ (33) ಪಾರ್ಥಿವ ಶರೀರ ಡಿ.26 ಗುರುವಾರ ಹುಟ್ಟೂರು ಬೀಜಾಡಿಗೆ ಆಗಮಿಸಿದ್ದು ಸಹಸ್ರಾರು ಮಂದಿ ಅಂತಿಮ ದರ್ಶನ ಪಡೆದರು.

ತಡರಾತ್ರಿ 1.15 ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾರ್ಥಿವ ಶರೀರವನ್ನು ಅಧಿಕಾರಿಗಳು ಕುಟುಂಬದವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ ಮೊದಲಾದವರಿದ್ದರು. ಬಳಿಕ ಮೃತದೇಹವನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕೊಂಡೊಯ್ದು ಇರಿಸಲಾಗಿತ್ತು. ಬೆಳಿಗ್ಗೆ ಗಾಜಿನ ಕಿಟಕಿಯುಳ್ಳ ಅಂಬುಲೆನ್ಸ್ ವಾಹನಕ್ಕೆ ಪುಷ್ಪಾಲಂಕಾರ ಮಾಡಿ ಉಡುಪಿಯಿಂದ ಹೊರಡಲಾಯಿತು.

ಪಾರ್ಥಿವ ಶರೀರ ಆಗಮಿಸುವ ಮಾರ್ಗ ಮದ್ಯೆ ಬ್ರಹ್ಮಾವರ, ಸಾಸ್ತಾನ ಟೋಲ್ ಗೇಟ್, ಅನೂಪ್ ಕಲಿತ ಕೋಟ ವಿವೇಕ ಶಾಲೆ ಎದುರು, ಕೋಟ ಅಮೃತೇಶ್ವರಿ ದೇವಸ್ಥಾನದ ಎದುರು ಜಮಾಯಿಸಿದ ಜನರು 'ಅನೂಪ್ ಅಮರ್ ರಹೇ', ಭಾರತ ಮಾತಾಕಿ ಜೈಕಾರ ಕೂಗುತ್ತಾ ಪುಷ್ಪಾರ್ಚನೆ ಮಾಡಿ ಅಂತಿಮ ದರ್ಶನ ಪಡೆದರು. ಬಳಿಕ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಹಸ್ರಾರು ಮಂದಿ ನೆರೆದು ಪಾರ್ಥಿವ ಶರೀರವನ್ನು ಬರಮಾಡಿಕೊಂಡರು. ತೆಕ್ಕಟ್ಟೆಯಿಂದ ಕೋಟೇಶ್ವರ ಮಾರ್ಗವಾಗಿ ವಾಹನ ಜಾಥಾ ಮೂಲಕ ಸಾಗಿ ಬೀಜಾಡಿ‌ ನಿವಾಸಕ್ಕೆ ಕರೆತರಲಾಯಿತು.

ಮನೆಯವರ ಆಕ್ರಂಧನ

ಮೃತದೇಹ ಮನೆಗೆ ಆಗಮಿಸುತ್ತಿದ್ದಂತೆಯೇ ಅನೂಪ್ ತಾಯಿ, ಪತ್ನಿ, ಸಹೋದರಿಯರು ಸೇರಿದಂತೆ ಕುಟುಂಬಿಕರ ಆಕ್ರಂಧನ ಮುಗಿಲುಮುಟ್ಟಿತ್ತು. ಮನೆಯಲ್ಲಿ ವಿಧಿಗಳನ್ನು ನೆರವೇರಿಸಿದ ಬಳಿಕ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕೆ.ಟಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು. ಮನೆಯಿಂದ ಅನತಿ ದೂರದಲ್ಲಿ ರುವ ಅನೂಪ್ ಕಲಿತ ಶಾಲೆಗೆ ಮೃತದೇಹ ಕೊಂಡೊಯ್ದು ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು ಸುಮಾರು ಮೂರು ಗಂಟೆಗೂ ಅಧಿಕ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮೊದಲಾದವರಿದ್ದರು.

ಮನೆ ಸಮೀಪದ ಸಮುದ್ರ ತೀರದ ಜಾಗದಲ್ಲಿ ಅಂತಿಮ ನಮನ ಸಲ್ಲಿಸಿ ಸೇನೆಯ ಗೌರವವಂದನೆ ನೀಡಿ, ಸೇನೆಯ ಅಧಿಕಾರಿಗಳು ಅನೂಪ್ ಪೂಜಾರಿ ಪತ್ನಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಸಕಲ ವಿಧಿವಿಧಾನಗಳು ನಡೆದ ಬಳಿಕ 2.45ಕ್ಕೆ ಅಗ್ನಿ ಸ್ಪರ್ಶ‌ಮಾಡಿ ಅಂತ್ಯಕ್ರಿಯೆ ಸಂಪನ್ನಗೊಂಡಿತು.











Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News