ಕಪ್ಪು ಗಿಡಿ ತುಳು ಕಾದಂಬರಿಯ ಆಂಗ್ಲ ಅವತರಣಿಕೆ ಬಿಡುಗಡೆ
ಉಡುಪಿ, ಜ.24: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ ರಚಿತ ತುಳು ಕಾದಂಬರಿ ‘ಕಪ್ಪು ಗಿಡಿ’ ಇದರ ಆಂಗ್ಲ ಅವತರಣಿಕೆ ‘ದಿ ಬ್ಲ್ಯಾಕ್ ಈಗಲ್’ ಕೃತಿ ಬಿಡುಗಡೆ ಸಮಾರಂಭ ಮಂಗಳೂರಿನ ಕಲ್ಲಚ್ಚು ಪ್ರಕಾಶನದ ವತಿಯಿಂದ ಹೋಟೆಲ್ ಕಿದಿಯೂರಿನ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕೇಂದ್ರ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಕೃತಿ ಬಿಡುಗಡೆ ಮಾಡಿ ಮಾತನಾಡಿ, ತುಳು ನಾಟಕ, ಸಿನಿಮಾ ಆಗಲು ಕೃತಿ ಯೋಗ್ಯವಾಗಿದ್ದು ಭಾಷಾಂತರವು ಯಾವುದೇ ಭಾಷೆಗೆ ಕೊಡುಗೆ ಕೊಡುವ ಮಹತ್ವದ ಕೆಲಸ. ತುಳುವಿಗೆ ರಾಜ್ಯದಲ್ಲಿ ದ್ವಿತೀಯ ಭಾಷೆಯ ಮನ್ನಣೆ ಜತೆಗೆ ಕೇಂದ್ರ ಸರಕಾರ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮನ್ನಣೆ ಸಿಗಬೇಕೆಂಬ ಕನಸು ನನಸಾಗಲು ತುಳು ಸಾಹಿತ್ಯ ಹೆಚ್ಚೆಚ್ಚು ಅನ್ಯ ಭಾಷೆಗಳಿಗೆ ಅನುವಾದ ವಾಗಬೇಕು ಎಂದರು.
ಅನುವಾದಕ, ಗೋವಾದ ಎಸ್.ಎನ್.ಡಿ. ಪೂಜಾರಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು. ಮಂಗಳೂರಿನ ಕಲ್ಲಚ್ಚು ಪ್ರಕಾಶನದ ಪ್ರಕಾಶಕ ಮಹೇಶ ಆರ್. ನಾಯಕ್ ಸ್ವಾಗತಿಸಿ, ವಂದಿಸಿದರು.