ಉಡುಪಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಉಡುಪಿ, ಜ.24: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಇಂದು ನಡೆಯಿತು.
ಇದರಲ್ಲಿ ಹೆಣ್ಣು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಿ ಬಹುಮಾನ ನೀಡುವುದರ ಜೊತೆಗೆ ಎಲ್ಲಾ ಹೆಣ್ಣು ಮಕ್ಕಳಿಗೆ ಉಡುಗೊರೆಯನ್ನು ನೀಡಿ ವಿಶೇಷ ರೀತಿಯಲ್ಲಿ ಗೌರವಿಸುವ ಮೂಲಕ ವಿನೂತನವಾಗಿ ದಿನವನ್ನು ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರತ್ನ ವಹಿಸಿ ಮಾತನಾಡಿ ಹೆಣ್ಣುಮಕ್ಕಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ ಶ್ರೀರಾಮ ರಾವ್ ಕೆ. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಆತ್ಮಸ್ಥೈರ್ಯದಿಂದ ಬದುಕಲು ಮಾನಸಿಕವಾಗಿ ಸದೃಢವಾಗಿರುವಂತೆ ಬೆಳೆಸಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ದೀಪಾ ಕೆ ಶೆಟ್ಟಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಇರುವ ಕಾನೂನುಗಳು ಮತ್ತು ಕಾಯ್ದೆಗಳ ಕುರಿತು ವಿವರಿಸಿದರು. ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿ ಡಾ. ಲತಾ ನಾಯಕ್ ಮಾತನಾಡಿದರು.
ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ ಜ್ಯೋತ್ಸ್ನಾ ಬಿ.ಕೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಸ್ವಾಗತಿಸಿ ವಂದಿಸಿದರು.