ಉಡುಪಿ ಮಹಾನಗರ ಪಾಲಿಕೆಯನ್ನಾಗಿಸಲು ಜನಾಭಿಪ್ರಾಯ: ಸಾಧಕಬಾಧಕ ಚರ್ಚೆಗೆ ಸಾರ್ವಜನಿಕ ಸಭೆ ಕರೆಯಲು ನಗರಸಭೆ ನಿರ್ಣಯ
ಉಡುಪಿ: ಉಡುಪಿ ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಸಾರ್ವಜನಿಕ ಸಭೆ ಕರೆದು ಸಾಧಕ ಬಾಧಕ ಚರ್ಚೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಲು ಸೋಮವಾರ ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಗಿರೀಶ್ ಅಂಚನ್, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಒಳಪಡದ ಕಟಪಾಡಿ, ಕೋಟೆ, ಮಣಿಪುರ ಗ್ರಾಪಂ ಗಳು ಮಹಾನಗರಪಾಲಿಕೆ ಸೇರ್ಪಡೆಗೊಳಿಸುವುದರಿಂದ ಮುಂದೆ ವಿರೋಧ ಬರುವ ಸಾಧ್ಯತೆಗಳಿವೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಇದೀಗ ನಗರಸಭೆಗೆ ಸೇಪರ್ಡೆಗೊಂಡ ಗ್ರಾಮಗಳಲ್ಲಿಯೇ ಮೂಲಭೂತ ಸೌರ್ಕರ್ಯದ ಕೊರತೆ ಇದೆ. ಒಳಚರಂಡಿ, ರಸ್ತೆ ಸಮಸ್ಯೆಗಳಿವೆ. ಇದೆಲ್ಲ ಕೊರತೆಯ ಮಧ್ಯೆ ಮಹಾ ನಗರಪಾಲಿಕೆ ಯಾಗಿ ಮೇಲ್ದರ್ಜೆಗೇರಿಸಿದರೆ ಮುಂದೆ ಸಮಸ್ಯೆ ಇನ್ನಷ್ಟು ಜಾಸ್ತಿ ಯಾಗಲಿದೆ. ಆದುದರಿಂದ ಜನಾಭಿಪ್ರಾಯ ಸಂಗ್ರಹಿಸಲು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಾರ್ವಜನಿಕರ ಸಭೆ ಕರೆಯಬೇಕು ಎಂದು ತಿಳಿಸಿದರು.
ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕಾದರೆ ೩ಲಕ್ಷ ಜನಸಂಖ್ಯೆ, ಪ್ರತಿ ಚದರ ಕಿ.ಮೀ.ಗೆ 3000 ಜನಸಾಂದ್ರತೆ, 6 ಕೋಟಿ ರೂ. ರಾಜಸ್ವ, ಕೃಷಿಯೇತರ ಚಟುವಟಿಕೆಗಳಲ್ಲಿ ಶೇ.50 ಉದ್ಯೋಗಾವಕಾಶಗಳು ಇರಬೇಕು. ಇದೀಗ ಈ ಸಂಬಂಧ ತಾತ್ಕಾಲಿಕವಾಗಿ ಟಿಪ್ಪಣಿಯನ್ನು ಸಿದ್ಧಪಡಿಸಲಾಗಿದೆಂದು ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ಬೀದಿನಾಯಿಗಳ ಹಾವಳಿ: ಸದಸ್ಯೆ ಅಮೃತಾ ಕೃಷ್ಣಮೂರ್ತಿ, ನಗರದಲ್ಲಿನ ಬೀದಿನಾಯಿ ಹಾವಳಿ ಕುರಿತು ಸಭೆಯ ಗಮನ ಸೆಳೆದರು. ಬೀದಿ ನಾಯಿ ಕಚ್ಚಿದರೆ ಸ್ಥಳೀಯಾಡಳಿತವೇ ಹೊಣೆ ಎಂಬ ಜಿಲ್ಲಾಧಿಕಾರಿ ಹೇಳಿಕೆ ಬಗ್ಗೆ ಸಭೆ ಯಲ್ಲಿ ಚರ್ಚೆ ನಡೆಯಿತು.
ಈ ಬಗ್ಗೆ ಮಾತನಾಡಿದ ಯಶ್‌ಪಾಲ್ ಸುವರ್ಣ, ಬೀದಿನಾಯಿಗಳ ಹಾವಳಿ ಇಡೀ ಜಿಲ್ಲೆಯ ಸಮಸ್ಯೆಯಾಗಿರುವುದರಿಂದ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಚರ್ಚೆ ನಡೆಸಬೇಕು ಎಂದರು. ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಗಾಗಿ ಮಣಿಪಾಲ ಹಾಗೂ ಮಲ್ಪೆಯಲ್ಲಿ ಪಶುಸಂಗೋಪನಾ ಇಲಾಖೆ ಯವರು ಜಾಗ ಗುರುತಿಸಿದ್ದಾರೆ. ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡಲು ಅವಕಾಶ ಇಲ್ಲ. ಅದಕ್ಕಾಗಿಯೇ ಪ್ರತ್ಯೇಕ ಸ್ಥಳ ಗುರುತಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.
ಚರಂಡಿಗೆ ಕೊಳಚೆ ನೀರು: ವಸತಿ ಸಮುಚ್ಛಯಗಳ ಕೊಳಚೆ ನೀರನ್ನು ನೇರವಾಗಿ ಚರಂಡಿಗೆ ಬಿಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅಂತಹ ವಸತಿ ಸಮುಚ್ಛಯಗಳ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ಸದಸ್ಯರು ಒಕ್ಕೋರಲಿನ ಆಗ್ರಹ ಮಾಡಿದರು.
ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದುರ್ಗಾ ಪ್ರಸಾದ್ ಮಾತನಾಡಿ, ನಗರದಲ್ಲಿ ೪೭೪ ವಸತಿ ಸಮುಚ್ಛಯಗಳ ಪೈಕಿ ಕೊಳಚೆ ನೀರು ಚರಂಡಿಗೆ ಬಿಡುವ 13 ಕಟ್ಟಡಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದರು. ಮುಂದಿನ ಕ್ರಮವಾಗಿ ಆ ಕಟ್ಟಡಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಪರಿಸರ ಇಂಜಿನಿಯರ್ ಸ್ನೇಹಾ ತಿಳಿಸಿದರು. ಅದರಂತೆ ರಸ್ತೆ ಹಾಗೂ ಚರಂಡಿಗೆ ಕೊಳಚೆ ನೀರು ಬಿಡುವ ಕಟ್ಟಡಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ನಿರ್ಣಯಿಸಲಾಯಿತು.
ನಗರದಲ್ಲಿರುವ ಅನಧಿಕೃತ ಮೊಬೈಲ್ ಟವರ್, ಹೋಲ್ಡಿಂಗ್ಸ್‌ಗಳ ಮಾಹಿತಿ ಸಂಗ್ರಹಿಸಿ ವಾರದೊಳಗೆ ಕಾನೂನು ಕ್ರಮ ಜರಗಿಸುವ ಭರವಸೆಯನ್ನು ಪೌರಾಯುಕ್ತರು ಸಭೆಗೆ ನೀಡಿದರು.
ನೂತನ ನಾಮನಿರ್ದೇಶಿತ ಸದಸ್ಯರುಗಳಾದ ಸುರೇಶ್ ಶೆಟ್ಟಿ ಬನ್ನಂಜೆ,. ಯಾದವ ಅಮೀನ್, ಮುಹಮ್ಮದ್, ಪ್ರಣವ್ ಕುಮಾರ್, ಸದಾನಂದ ಮೂಲ್ಯ ಅವರನ್ನು ಅಧ್ಯಕ್ಷರು ಸಭೆಗೆ ಸ್ವಾಗತಿಸಿದರು. ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಉಪಸ್ಥಿತರಿದ್ದರು.
ಕಲ್ಸಂಕ ಜಂಕ್ಷನ್ ಬ್ಯಾರಿಕೇಡ್ ತೆರವು
ಉಡುಪಿ ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದ ಟ್ರಾಫಿಕ್ ನಿಯಂತ್ರಣ ಮಾಡಲು ಅಳವಡಿಸಿದ್ದ ಬ್ಯಾರಿಕೇಡ್ ತೆರವು ಮಾಡಲಾಗಿದ್ದು, ರವಿವಾರ ಸಂಜೆಯಿಂದಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದರು.
ಸಾರ್ವಜನಿಕರ ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಚರ್ಚೆ ನಡೆಸಿ ಬ್ಯಾರಿಕೇಡ್ ತೆರವಿಗೆ ಕ್ರಮ ವಹಿಸಲಾಗಿದೆ. ಸರಣಿ ರಜೆ ಹಾಗೂ ವಾರಾಂತ್ಯದಲ್ಲಿ ಪ್ರವಾಸಿಗರ ದಟ್ಟಣೆ ಉಂಟಾದ ಸಂದರ್ಭದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ವಾಹನ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯ ಮಾರ್ಗ ಸೂಚಿಯಂತೆ ನಗರಸಭೆಯ ಅನುದಾನದಿಂದ ಶೀಘ್ರದಲ್ಲಿ ಕಲ್ಸಂಕದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲಾಗುವುದು ಎಂದರು.
ಪ್ರಾರ್ಥನ ಮಂದಿರದ ವಿರುದ್ಧ ಕ್ರಮಕ್ಕೆ ಆಗ್ರಹ
ನಗರದ ಜೋಡುಕಟ್ಟೆಯಲ್ಲಿನ ಪ್ರಾರ್ಥನ ಮಂದಿರದಲ್ಲಿ ಮತಾಂತರ ಮಾಡಲಾಗುತ್ತಿದ್ದು, ಇಲ್ಲಿ ಹೆಚ್ಚುವರಿ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸದಸ್ಯ ವಿಜಯ ಕುಮಾರ್ ಕೊಡವೂರು ಆಗ್ರಹಿಸಿದರು.
ಈ ಪ್ರಾರ್ಥನಾ ಮಂದಿರವು ನಗರಸಭೆ ದಾಖಲೆಯಲ್ಲಿ ಇಂಡಿಯ ಪೆಂಟಕೋಸ್ಟ್ ಚರ್ಚ್ ಎಂಬುದಾಗಿ ನಮೂದಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು. ಈ ಬಗ್ಗೆ ಆಡಳಿತ ಪಕ್ಷದ ಸದಸ್ಯರು, ದಾಖಲೆಯನ್ನು ತಿದ್ದಿ ಮನೆಯನ್ನು ಚರ್ಚ್ ಎಂಬುದಾಗಿ ಮಾಡಲಾಗಿದೆ ಎಂದು ದೂರಿದರು.
ಈ ರೀತಿ ಮಾಡಿದರೆ ಉಡುಪಿಯ ಜನತೆ ಸುಮ್ಮನೆ ಇರಲು ಆಗಲ್ಲ ಎಂದು ಶಾಸಕರು ಎಚ್ಚರಿಸಿದರು. ಇದರ ವಿರುದ್ಧ ಕ್ರಮ ಜರಗಿಸದಿದ್ದರೆ ಕೋರ್ಟ್ ಮೊರೆ ಹೋಗಲಾಗುವುದು ಎಂದು ಸದಸ್ಯ ಕೃಷ್ಣರಾವ್ ಕೊಡಂಚ ಎಚ್ಚರಿಕೆ ನೀಡಿದರು. ಚರ್ಚ್‌ಗೆ ಸಂಬಂಧಿಸಿ ದಾಖಲೆಗಳನ್ನು ಅಧ್ಯಕ್ಷರ ಸಮ್ಮುಖದಲ್ಲಿ ಒಂದು ವಾರದೊಳಗೆ ಪರಿಶೀಲಿಸಲಾಗುವುದು ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು.