×
Ad

ಸರಕಾರಿ ಬಸ್ ಸೇವೆಗಾಗಿ ಆಲೂರು, ನಾಡ ಗ್ರಾಮಸ್ಥರಿಂದ ಆರ್‌ಟಿಓ ಕಚೇರಿ ಎದುರು ಧರಣಿ

Update: 2025-02-04 18:21 IST

ಉಡುಪಿ: ಆಲೂರು, ಹೊಯ್ಯಾಣ ಕ್ರಾಸ್, ತಾರಿಬೇರು, ಅಕ್ಷಾಲಿಬೆಟ್ಟು ಕೋಣ್ಕಿ, ನಾಡ, ಮೊವಾಡಿ ಮಾರ್ಗವಾಗಿ ಕುಂದಾಪುರಕ್ಕೆ ಸರಕಾರಿ ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿ ಇಂದು ಮಣಿಪಾಲದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘಟನೆ, ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ) ಸಂಘಟನೆಗಳು ವಹಿಸಿದ್ದವು.

ಸ್ಥಳೀಯ ಮುಖಂಡರಾದ ರಾಜೀವ ಪಡುಕೋಣೆ ಮಾತನಾಡಿ, ನಾವು ಕೇಳುತ್ತಿರುವ ಮಾರ್ಗದಲ್ಲಿ ಯಾವುದೇ ಬಸ್ಸುಗಳು ಓಡಾಡುತ್ತಿಲ್ಲ. ಇಲ್ಲಿನ ಗ್ರಾಮೀಣ ಪ್ರದೇಶದ ಜನರು ಹಲವಾರು ವರ್ಷಗಳಿಂದ ಬಸ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮಕ್ಕಳು ಶಿಕ್ಷಣಕ್ಕಾಗಿ, ಉದ್ಯೋಗ ಖಾತ್ರಿ ಕೂಲಿಕಾರರು ಪ್ರಯಾಣಕ್ಕೆ ದುಬಾರಿ ವೆಚ್ಚ ನೀಡಿ ಆದಾಯ ಕಳೆದುಕೊಳ್ಳುತ್ತಿ ದ್ದಾರೆ. ಪ್ರಾಧಿಕಾರ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿತು ಬಸ್ ಸೌಲಭ್ಯ ನೀಡಬೇಕು ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೃಷಿಕೂಲಿಕಾರರ ಸಂಘಟನೆಯ ಪ್ರಮುಖರಾದ ನಾಗರತ್ನ ನಾಡ ಮಾತನಾಡಿ, ಆಲೂರು, ನಾಡ, ಹಕ್ಲಾಡಿ ಗ್ರಾಮದ ಮಹಿಳೆಯರಿಗೆ ಶಕ್ತಿ ಯೋಜನೆ ಸಾರಿಗೆ ಪ್ರಾಧಿಕಾರ ಕೊಡಿಸುವಲ್ಲಿ ಅನ್ಯಾಯ ಮಾಡಿದೆ. ಕೂಡಲೇ ಸರಕಾರಿ ಬಸ್ ಆರಂಭಿಸುವುದರ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸಾರಿಗೆ ಪ್ರಾಧಿಕಾರ ಜನರ ಹೋರಾಟ ಗಳನ್ನು ನಿರ್ಲಕ್ಷಿಸುತ್ತಿದೆ. ಈ ಹಿಂದೆ ಕೊಲ್ಲೂರು ಗ್ರಾಮಸ್ಥರು ಹೋರಾಟ ಮಾಡಿ ಬೈಂದೂರು ಕೊಲ್ಲೂರು ಮಾರ್ಗಕ್ಕೆ ಬಸ್ ಓಡಿಸುವಂತೆ ಮಾಡಿದರೂ ಈಗ ಅದನ್ನು ರದ್ದು ಪಡಿಸಿರುವುದು ಖಂಡನೀಯ. ಇಂತಹ ವರ್ತನೆ ಪ್ರಾಧಿಕಾರ ಕೈಬಿಡಬೇಕು. ಜನರ ಬೇಡಿಕೆಯನ್ನು ಈಡೇರಿಸಲು ಪ್ರಾಧಿಕಾರ ಮುಂದಾಗಬೇಕು ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಮುಖಂಡರಾದ ಎಚ್.ನರಸಿಂಹ ಮಾತನಾಡಿದರು. ಬಳಿಕ ಈ ಕುರಿತ ಮನವಿಯನ್ನು ಉಡುಪಿ ಪ್ರಾದೇಶಿಕ ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರಿಗೆ ಸಲ್ಲಿಸಲಾಯಿತು.

ಧರಣಿಯಲ್ಲಿ ಮುಖಂಡರಾದ ಚಂದ್ರಶೇಖರ ವಿ., ಕವಿರಾಜ್ ಎಸ್.ಕಾಂಚನ್, ರಘುರಾಮ ಆಚಾರ್ಯ ಆಲೂರು, ಶೀಲಾವತಿ ಹಡವು, ನಾಗರತ್ನ ಪಡುವರಿ, ನಿಸರ್ಗ, ಬಲ್ಕೀಸ್, ನಳಿನಿ, ಉಮೇಶ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು. ಡಿವೈಎಫ್‌ಐ ಮುಖಂಡ ರಾಜೇಶ್ ಪಡುಕೋಣೆ ಸ್ವಾಗತಿಸಿದರು. ನಾಡ ಗ್ರಾಪಂ ಸದಸ್ಯೆ ಶೋಭಾ ಕೆರೆಮನೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News