×
Ad

ಉಡುಪಿ-ಪ್ರಯಾಗ್‌ರಾಜ್ ವಿಶೇಷ ರೈಲಿಗೆ ಎರಡು ಹೆಚ್ಚುವರಿ ಸ್ಲೀಪರ್ ಕೋಚ್‌ಗಳು

Update: 2025-02-16 18:12 IST

ಉಡುಪಿ, ಫೆ.16: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರನ್ನು ಸೋಮವಾರ ಉಡುಪಿ ರೈಲು ನಿಲ್ದಾಣದಿಂದ ಕರೆದೊಯ್ಯುವ ಮಹಾಕುಂಭ ಸ್ಪೆಷಲ್ ರೈಲಿಗೆ (ರೈಲು ನಂ.01192) ಎರಡು ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಸೇರ್ಪಡೆಗೊಳಿಸಲು ಕೊಂಕಣ ರೈಲ್ವೆ ನಿಗಮ ನಿರ್ಧರಿಸಿದೆ.

ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಟಿಕೇಟಿಗಾಗಿ ಜನರ ಭಾರೀ ಬೇಡಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಕ್ತರನ್ನು ಹೊತ್ತ ಈ ರೈಲು ನಾಳೆ (ಫೆ.17) ಅಪರಾಹ್ನ 12:30ಕ್ಕೆ ಉಡುಪಿಯಿಂದ ಪ್ರಯಾಣ ಬೆಳೆಸಲಿದೆ. ಈ ರೈಲು ಬುಧವಾರ ಮುಂಜಾನೆ ಪ್ರಯಾಗ್‌ರಾಜ್ ತಲುಪಲಿದೆ. ಮರು ಪ್ರಯಾಣದಲ್ಲಿ ಗುರುವಾರ ಹೊರಟು ಈ ರೈಲು ಶನಿವಾರ ಸಂಜೆ 6:10ಕ್ಕೆ ಉಡುಪಿ ತಲುಪಲಿದೆ.

ಈ ರೈಲು ಇದೀಗ ಒಟ್ಟು 22 ಕೋಚ್‌ಗಳೊಂದಿಗೆ ಸಂಚರಿಸಲಿದೆ. ಇವುಗಳಲ್ಲಿ ಒಂದು 2ಟಯರ್ ಎಸಿ ಕೋಚ್, ಐದು 3ಟಯರ್ ಎಸಿ ಕೋಚ್, 12 ಸ್ಲೀಪರ್ ಕೋಚ್, 2 ಜನರಲ್ ಕೋಚ್ ಹಾಗೂ 2 ಎಸ್‌ಎಲ್‌ಆರ್ ಕೋಚ್‌ಗಳನ್ನು ಹೊಂದಿರುತ್ತದೆ.

ಈ ರೈಲಿಗೆ ರಾಜ್ಯ ಕರಾವಳಿಯಲ್ಲಿ ಬಾರಕೂರು, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಭಟ್ಕಳ, ಮುರ್ಡೇಶ್ವರ, ಕುಮಟಾ, ಗೋಕರ್ಣ ರೋಡ್, ಕಾರವಾರಗಳಲ್ಲಿ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಪೇಜಾವರ ಶ್ರೀ ಚಾಲನೆ: ಅತ್ಯಂತ ಕಡಿಮೆ ದರದಲ್ಲಿ ಕುಂಭಮೇಳಕ್ಕೆ ಹೋಗಿ ಬರುವ ರೈಲಿಗೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಅಪರಾಹ್ನ 12ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇದೇ ವೇಳೆ ಕರಾವಳಿ ಹಾಗೂ ಮುಂಬಯಿಯನ್ನು ಬೆಸೆಯುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಓಡಾಟ ಪ್ರಾರಂಭಿಸಿದ 27 ವರ್ಷಗಳ ಬಳಿಕ ಹೈಟೆಕ್ ಸ್ಪರ್ಶದೊಂದಿಗೆ ಹೊಸ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ನಾಳೆ ತನ್ನ ಮೊದಲ ಪ್ರಯಾಣವನ್ನು ಕೈಗೊಳ್ಳಲಿದೆ. ಈ ರೈಲು ಅಪರಾಹ್ನ 3 ಗಂಟೆಗೆ ಉಡುಪಿ ರೈಲು ನಿಲ್ದಾಣಕ್ಕೆ ಆಗಮಿಸಲಿದ್ದು ಈ ಸಂದರ್ಭ ಸಾರ್ವಜನಿಕರು ಜೊತೆಗಿರುವಂತೆ ಸಂಸದರು ಆಮಂತ್ರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News