×
Ad

ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಿ: ಡಿಸಿ ವಿದ್ಯಾಕುಮಾರಿ

Update: 2025-02-19 20:36 IST

ಮಣಿಪಾಲ: ಜಿಲ್ಲೆಯಲ್ಲಿ ತಾಯಿ ಹಾಗೂ ಮಕ್ಕಳ ಸಾವು ಕನಿಷ್ಠ ಪ್ರಮಾಣದಲ್ಲಿದೆ. ಪ್ರತೀ ತಾಯಿ ಮತ್ತು ಮಗುವಿನ ಸಾವನ್ನು ತಡೆಯಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸರ್ವ ಪ್ರಯತ್ನಗಳನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿ ಯಾನ ಉಡುಪಿ ಜಿಲ್ಲೆ ಹಾಗೂ ಮಣಿಪಾಲ ಮಾಹೆಯ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗಗಳ ಸಹಯೋಗದೊಂದಿಗೆ ಪ್ರಸೂತಿ ತಜ್ಞರು ಹಾಗೂ ವೈದ್ಯಾಧಿಕಾರಿಗಳಿಗೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯದ ಸಮಗ್ರ ಅಧ್ಯಯನದ ಕುರಿತು ಕೆಎಂಸಿಯ ಡಾ.ಟಿಎಂಎ ಪೈ ಅಡಿಟೋರಿಯಂನಲ್ಲಿ ಇಂದು ಆಯೋಜಿಸಲಾದ ತರಬೇತಿ ಕಾರ್ಯಾಗಾರ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಸ್ವಾಭಾವಿಕ ಹೆರಿಗೆಗೆ ಹೆಚ್ಚಿನ ಒತ್ತು ನೀಡಬೇಕು. ಅನಿವಾರ್ಯ ವೆನಿಸಿದರೆ, ತುರ್ತು ಸಂದರ್ಭಗಳಲ್ಲಿ ಮಾತ್ರ ಸಿಝೇರಿಯನ್ ಮೂಲಕ ಹೆರಿಗೆ ಮಾಡಿಸಬೇಕು ಎಂದವರು ವೈದ್ಯರಿಗೆ ಸಲಹೆ ನೀಡಿದರು.

ಹದಿಹರೆಯದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ ಸೇವನೆ ಸೇರಿದಂತೆ ಸದೃಢ ಆರೋಗ್ಯ ಹೊಂದಲು ತೆಗೆದುಕೊಳ್ಳ ಬೇಕಾದ ಎಚ್ಚರಿಕೆ ಕುರಿತಂತೆ ಮಾಹಿತಿಗಳನ್ನು ನೀಡಬೇಕು. ಹೆರಿಗೆಗೂ ಮುನ್ನ ಹೆಣ್ಣು ಮಕ್ಕಳಿಗೆ ಆಗಿಂದಾಗ್ಗೆ ಆರೋಗ್ಯ ತಪಾಸಣೆಗಳನ್ನು ನಿಯುಮಿತವಾಗಿ ಮಾಡುವುದರೊಂದಿಗೆ ಆರೋಗ್ಯ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರಲ್ಲದೇ, ಪ್ರತೀ ಜಿಲ್ಲೆಯಲ್ಲಿ ನಡೆಯುತ್ತಿರುವ ಸಿಝೇರಿಯನ್ ಡೆಲಿವರಿಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಅಗತ್ಯತೆಗಳ ಬಗ್ಗೆ ಹೆಚ್ಚು ತಿಳುವಳಿಕೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, ಜಿಲ್ಲೆಯಲ್ಲಿ ಕಸ್ತೂರ್ಬಾ ಸಮೂಹ ಆಸ್ಪತ್ರೆಗಳು ಹಾಗೂ ಸಂಸ್ಥೆಯು ಗ್ರಾಮೀಣ ಆರೋಗ್ಯ ಕೇಂದ್ರಗಳ ಮೂಲಕ ತಾಯಿ-ಮಕ್ಕಳ ಮರಣ ಪ್ರಮಾಣ ತಡೆಯಲು ನೀಡುತ್ತಿರುವ ನಿರಂತರ ಸಹಕಾರಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರತ್ನ, ಮಣಿಪಾಲ ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕರ್ನಾಟಕ ವೈದ್ಯಕೀಯ ಪರಿಷತ್ತಿನ ವೀಕ್ಷಕ ಡಾ. ಪ್ರೇಮಾನಂದ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೆಎಂಸಿ ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ. ಕೆ. ಸ್ವಾಗತಿಸಿ, ಡಾ. ರಕ್ಷಿತಾ ಆರ್. ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹಪ್ರಾಧ್ಯಾಪಕಿ ಡಾ. ಈಶ್ವರೀ ಕೆ. ವಂದಿಸಿದರು.

ತರಬೇತಿ ಕಾರ್ಯಾಗಾರದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ 10 ಮಂದಿ ತಜ್ಞ ವೈದ್ಯರು ಹೆರಿಗೆ ಸಮಯದಲ್ಲಿ ಮಹಿಳೆ ಹಾಗೂ ಮಗುವಿನ ಆರೋಗ್ಯದಲ್ಲಾಗಬಹುದಾದ ಕ್ಲಿಷ್ಟಕರ ಸಂದರ್ಭಗಳ ನಿರ್ವಹಣೆ ಹಾಗೂ ಅವರ ಆರೋಗ್ಯ ರಕ್ಷಣೆ, ಸುಧಾರಣೆ ಕ್ರಮಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.ಸುಮಾರು 207 ಮಂದಿ ವೈದ್ಯರು ಹಾಗೂ ಇತರರು ಇದರಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News