×
Ad

ಮಲ್ಪೆಯಲ್ಲಿ ಛತ್ರಪತಿ ಶಿವಾಜಿ ಜಯಂತಿ

Update: 2025-02-19 20:38 IST

ಉಡುಪಿ, ಫೆ.19: ಛತ್ರಪತಿ ಶಿವಾಜಿ ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡಿದ್ದ ಆದರ್ಶ, ತತ್ವಗಳು ಎಲ್ಲರಿಗೂ ಮಾದರಿ ಯಾಗಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದ್ದಾರೆ.

ಬುಧವಾರ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಿವಾಜಿಯ ಜೀವನ ಚರಿತ್ರೆಯನ್ನು ಅವಲೋಕಿಸಿ ಇತಿಹಾಸಕ್ಕೆ ನೀಡಿದ ಅವರ ಕೊಡುಗೆಗಳನ್ನು, ವ್ಯಕ್ತಿತ್ವ ಗುಣಗಳನ್ನು ಅರಿತುಕೊಳ್ಳಬೇಕು. ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಶಿವಾಜಿಯವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ನಾಗರಾಜ್ ನಾಯಕ್ ಮಾತನಾಡಿ, ಅಂದಿನ ಕಾಲಘಟ್ಟದಲ್ಲಿ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ ಧೀಮಂತ ನಾಯಕ ಶಿವಾಜಿಯಾಗಿದ್ದು, ಒಳ್ಳೆಯ ಆಡಳಿತಕ್ಕೆ ಆತ ಹೆಸರಾಗಿದ್ದ ಎಂದರು.

ಲೇಖಕ ಮತ್ತು ಕಥೆಗಾರರಾದ ಮಂಜುನಾಥ ಹಿಲಿಯಾಣ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯ ಕ್ರಮದಲ್ಲಿ ಸಮುದಾಯದ ವತಿ ಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ್ ರಾವ್ ಬಡಾನಿಡಿಯೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಮೃದ್ಧಿ ಆರ್ ಇವರನ್ನು ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ, ಮರಾಠ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರೆ, ತೇಜಸ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಹಿರಿಯ ಶಿಕ್ಷಕ ಸತೀಶ್ ಭಟ್ ವಂದಿಸಿದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News