ರಿಕ್ಷಾ ಚಾಲಕರು, ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕ್ರಮ: ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ: ರೈಲು ಪ್ರಯಾಣಿಕರಿಗೆ ಅನುಕೂಲವಾಗಲು ಪ್ರಿಪೇಯ್ಡ್ ಆಟೋ ವ್ಯವಸ್ಥೆ ಮಾಡಲಾಗಿದ್ದು ಸಣ್ಣಪುಟ್ಟ ಗೊಂದಲಗಳನ್ನು ಸಮನ್ವಯತೆಯಿಂದ ಸರಿಪಡಿಸಿಕೊಳ್ಳಬೇಕು. ಇದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಬಾರದು. ರಿಕ್ಷಾ ಚಾಲಕರ ಸಮಸ್ಯೆಗಳ ಬಗ್ಗೆಯೂ ಸೂಕ್ತ ಗಮನಹರಿಸಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ರೈಲು ನಿಲ್ದಾಣದಲ್ಲಿರುವ ಪ್ರಿಪೇಯ್ಡ್ ಆಟೋ ರಿಕ್ಷಾಗಳ ಸಮಸ್ಯೆ ಹಾಗೂ ಅಹವಾಲುಗಳ ಕುರಿತ ರಿಕ್ಷಾ ಯೂನಿಯನ್, ಕೊಂಕಣ ರೈಲ್ವೆ ಅಧಿಕಾರಿಗಳು, ರೈಲು ಯಾತ್ರಿಕರ ಸಂಘ, ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಉಪಸ್ಥಿತಿಯಲ್ಲಿ ಮಂಗಳವಾರ ಕುಂದಾಪುರ ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಸಭೆಯಲ್ಲಿ ಮೊದಲಿಗೆ ರಿಕ್ಷಾ ಚಾಲಕ ಚಂದ್ರ ಪೂಜಾರಿ ಮೂಡ್ಲಕಟ್ಟೆ ಮಾತನಾಡಿ, ನಿರ್ದಿಷ್ಟ ಸ್ಥಳಕ್ಕೆ ಪ್ರಯಾಣಿಕರನ್ನು ಬಿಡಲು ಪ್ರಿಪೇಯ್ಡ್‌ನವರು ನಿಗದಿ ಪಡಿಸುವ ದರದಲ್ಲಿ ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕರ ನಡುವೆ ಗೊಂದಲ ಉಂಟಾ ಗುತ್ತಿದೆ. ಮೊದಲಿಗೆ 49 ಆಟೋಗಳಿದ್ದು ಇದೀಗ 73 ಆಟೋಗಳು ಪ್ರಿಪೇಯ್ಡ್ ಅಡಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ. ಬಾಡಿಗೆ ವಿಚಾರದಲ್ಲಿ ಪರ್ಸಂಟೇಜ್ ಹಣವನ್ನು ಗುತ್ತಿಗೆ ಕಂಪೆನಿ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರೀಪೇಯ್ಡ್ ಜೊತೆಗೆ ಮೊದಲಿನಂತೆ ಮೀಟರ್ ಮೂಲಕ ಚಲಾಯಿಸಲು ಅವಕಾಶ ನೀಡಬೇಕು. ಆಟೋಗಳ ಸಂಖ್ಯೆ ಕಡಿಮೆ ಮಾಡಬೇಕು ಎಂದರು. ರಿಕ್ಷಾ ಚಾಲಕರಾದ ಸಂತೋಷ್, ಅಣ್ಣಪ್ಪ ಮೊದಲಾದವರು ಪ್ರಿಪೇಯ್ಡ್ ಆಟೋ ವ್ಯವಸ್ಥೆ ಜನರಿಗೆ ಅನುಕೂಲವಾಗಿದೆ ಎಂದು ಅಭಿಪ್ರಾಯ ಪಟ್ಟರು. ಈ ಬಗ್ಗೆ ಆಟೋ ಚಾಲಕರ ನಡುವೆ ಪರ-ವಿರೋಧ ಚರ್ಚೆಗಳು ನಡೆದವು.
ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಪ್ರತಿಕ್ರಿಯಿಸಿ, ಪ್ರಿಪೇಯ್ಡ್ ಆಟೋ ಪದ್ದತಿ ಇರುವಾಗ ಮೀಟರ್ ಚಲಾಯಿ ಸುವ ವ್ಯವಸ್ಥೆ ಅಗತ್ಯವಿಲ್ಲ. ರೈಲ್ವೆಯವರು ನಿಗದಿಪಡಿಸಿದ ಕಮಿಷನ್ ದರವನ್ನು ಪ್ರಯಾಣಿಕರು ಹಾಗೂ ಆಟೋದವರಿಗೆ ಸಮಸ್ಯೆಯಾಗದಂತೆ ಟೆಂಡರ್ ಪಡೆದವರು ನೋಡಿ ಕೊಳ್ಳಬೇಕು ಎಂದರು.
ಪ್ರಿಪೇಯ್ಡ್ ಆಟೋ ಟೆಂಡರ್ ಪ್ರಕ್ರಿಯೆಯಲ್ಲಿ ಮೊದಲಿಗೆ ನಿಗದಿಯಾದಂತೆ ಕಿಲೋಮೀಟರ್ ಲೆಕ್ಕದಲ್ಲಿ ಹಣವನ್ನು ಪ್ರಯಾಣಿಕರು ಪಾವತಿಸಬೇಕಾಗುತ್ತದೆ. ಪ್ರಸ್ತುತ 150 ರೂ. ತನಕ ಶೇ.10 ಹಣ ಮತ್ತು 200 ರೂ. ಜಾಸ್ತಿ ಪ್ರಯಾಣ ವೆಚ್ಚಕ್ಕೆ ಶೇ.6 ಗುತ್ತಿಗೆ ಸಂಸ್ಥೆ ಕಮಿಷನ್ ನಿಗದಿ ಮಾಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಆರ್.ಟಿ.ಒ ನಿಗದಿಯಂತೆ ಬಾಡಿಗೆ ಪಡೆಯುವ ಕಾರಣ ಪ್ರಿಪೇಯ್ಡ್ ಆಟೋಗೆ ನಮ್ಮ ಇಲಾಖೆಗೆ ಯಾವುದೇ ಸಮಸ್ಯೆ ಮಾಡಿಲ್ಲ ಎಂದು ರಸ್ತೆ ಸಾರಿಗೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ರೈಲ್ವೆ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಹಾಗೂ ಸಮಿತಿ ಪ್ರಮುಖರಾದ ವಿವೇಕ್ ನಾಯಕ್ ಮಾತನಾಡಿ, ಪ್ರಸ್ತುತ ರೈಲುಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಪ್ರಯಾಣಿಕರು ಕೂಡ ಹೆಚ್ಚಾಗಿದ್ದಾರೆ. ಅವರಿಗೆ ಅನುಕೂಲ ವಾಗುವಂತೆ ಆಟೋ ಸಂಖ್ಯೆ ಬೇಕಾಗಿದೆ ಎಂದು ತಿಳಿಸಿದರು.