ಡಾ.ಪಿ.ಗುರುರಾಜ ಭಟ್ ನೆನಪಿನಲ್ಲಿ ಇತಿಹಾಸಕಾರ ಡಾ.ವಿಕ್ರಮ್ ಸಂಪತ್‌ಗೆ ಜನ್ಮ ಶತಮಾನೋತ್ಸವ ಪ್ರಶಸ್ತಿ
ಉಡುಪಿ, ಫೆ.27: ಬೆಂಗಳೂರಿನ ಇತಿಹಾಸಕಾರ ಡಾ.ವಿಕ್ರಮ್ ಸಂಪತ್ ಅವರಿಗೆ ನಾಡಿನ ಖ್ಯಾತನಾಮ ಇತಿಹಾಸಜ್ಞ ಡಾ.ಪಾದೂರು ಗುರುರಾಜ ಭಟ್ ಜನ್ಮದಿನದ ನೆನಪಿಗಾಗಿ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ‘ಜನ್ಮ ಶತಮಾನೋತ್ಸವ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಪಿ.ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಭಾರತೀಯ ಇತಿಹಾಸ ಹಾಗೂ ವಿಶೇಷವಾಗಿ ದೇವಾಲಯಗಳ, ದೇವತಾಮೂರ್ತಿಗಳ ಕುರಿತಾದ ಸಂಶೋಧನೆಯ ಕುರಿತಂತೆ ವಿಚಾರಗೋಷ್ಠಿ, ಇತಿಹಾಸ ವಿದ್ವಾಂಸರ ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ‘ಭಾರತೀಯ ಇತಿಹಾಸ: ವೈಭವದ ಇತಿಹಾಸ; ಮುಚ್ಚಿಟ್ಟ ಮತ್ತು ವಿರೂಪಗೊಳಿಸಿದ ವೈಭವ’ ವಿಷಯದ ಕುರಿತು ಮಾತನಾಡಿದ ಡಾ.ವಿಕ್ರಮ್ ಸಂಪತ್, ಇತಿಹಾಸ ಕನ್ನಡಿ ಇದ್ದಂತೆ. ಆದರೆ ಭಾರತದ ಇತಿಹಾಸವನ್ನು ಇದನ್ನು ವಿರೂಪವಾಗಿ ತೋರಿಸಲಾಗಿದೆ ಎಂದು ತನ್ನದೇ ಆದ ಉದಾಹರಣೆಗಳೊಂದಿಗೆ ವಿವರಿಸಿದರು. ಇದಕ್ಕೆ ಎಡಪಂಥೀಯ ಒಲವಿನ ಇತಿಹಾಸಕಾರರು ಕಾರಣ ಎಂದರು.
ಇತಿಹಾಸದಲ್ಲಿ ನಡೆದ ಸತ್ಯ ಸಂಗತಿಗಳನ್ನು ಬಹಿರಂಗಪಡಿಸಿದರೆ, ಜನರ ಮೇಲಾದ ದೌರ್ಜನ್ಯಗಳನ್ನು ತಿಳಿಸಿದರೆ ಇದರಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತದೆ ಎಂಬ ತಪ್ಪುಗ್ರಹಿಕೆಯನ್ನು ಹಬ್ಬಲಾಗುತ್ತದೆ ಎಂದು ಡಾ.ಸಂಪತ್ ದೂರಿದರು. ಸ್ವಾತಂತ್ರ್ಯ ಹೋರಾಟದ ಕುರಿತಂತೆಯೂ ನಿಜವಾದ ಸತ್ಯವನ್ನು ಜನರಿಗೆ ತಿಳಿಸಲಾಗಿಲ್ಲ. ಇಲ್ಲೂ ಸತ್ಯ ಸಂಗತಿಗಳನ್ನು ಎಷ್ಟು ಸಾದ್ಯವೋ ಅಷ್ಟು ವಿಕೃತಗೊಳಿಸಲಾಗಿದೆ ಎಂದು ಡಾ.ಸಂಪತ್ ಆರೋಪಿಸಿದರು.
ಟಿಪ್ಪುಸುಲ್ತಾನ್ ಹಾಗೂ ಹೈದರಾಲಿಯನ್ನು ವೈಭವೀಕರಿಸಿ, ಮೈಸೂರು ಒಡೆಯರ್ ಕುಟುಂಬವನ್ನು ಕೆಟ್ಟದ್ದಾಗಿ ಚಿತ್ರಿಸಿ ಸಂಜಯ್ ಖಾನ್‌ನ ‘ಟಿಪ್ಪು ಸುಲ್ತಾನ್’ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾದಾಗ ಸತ್ಯಾನ್ವೇಷಣೆ ಗಾಗಿ ನಾನು ಇತಿಹಾಸಕಾರನಾದೆ. ಒಂದು ವರ್ಷ ಒಡೆಯರ್ ಕುಟುಂಬದ ಇತಿಹಾಸವನ್ನು ಅಭ್ಯಸಿಸಿ ಕೃತಿ ರಚಿಸಿದೆ ಎಂದವರು ವಿವರಿಸಿದರು.
‘ದೇವಾಲಯಗಳ ರಕ್ಷಣೆ ಹಾಗೂ ಇತಿಹಾಸದಲ್ಲಿ ಭಗ್ನಗೊಂಡ ದೇವಾಲಯಗಳ ಪುನರ್ ನವೀಕರಣ’ ವಿಷಯದ ಕುರಿತು ಮಾತನಾಡಿದ ಪದ್ಮಶ್ರೀ ಪುರಸ್ಕೃತ ಕಲ್ಲಿಕೋಟೆಯ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮುಹಮ್ಮದ್, ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿರುವ ಬಟೇಶ್ವರದ ನೂರಾರು ದೇವಸ್ಥಾನಗಳನ್ನು ನವೀಕರಣಗೊಳಿಸಿರುವುದನ್ನು ವಿವರಿಸಿದರು. ತಾನು ಕಾರ್ಯ ನಿರ್ವಹಿಸುವಾಗ ಅದು ಕುಖ್ಯಾತ ಡಕಾಯಿರ ನಾಡಾಗಿತ್ತು ಎಂದರು.
ಚಂಬಲ್ ಕಣಿವೆಯಲ್ಲಿ ಪಾಳುಬಿದ್ದ ಸ್ಥಿತಿಯಲ್ಲಿ 200 ದೇವಸ್ಥಾನಗಳಿದ್ದವು. ಮಾನ್‌ಸಿಂಗ್‌ರಂಥ 22 ಪೊಲೀಸ್‌ರೂ ಸೇರಿ ದಂತೆ 185 ಮಂದಿಯನ್ನು ಕೊಲೆ ಮಾಡಿದ ಕುಪ್ರಸಿದ್ಧ ಡಕಾಯಿತ ಸೇರಿದಂತೆ 85 ಕೊಲೆ ಮಾಡಿದ ಮೋಹನ ಸಿಂಗ್, ಮಲ್ಕಾನ್ ಸಿಂಗ್‌ರಂಥ ದರೋಡೆಕೊರರ ಮನ ಒಲಿಸಿ ತಾನು ಈ ದೇವಸ್ಥಾನಗಳ ನವೀಕರಣ ಮಾಡಿರುವುದನ್ನು ಅವರು ಬಣ್ಣಿಸಿದರು.
ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಪಿ. ಶ್ರೀಪತಿ ತಂತ್ರಿ ಅವರು ಸಮಾವೇಶದ ಸಾಧ್ಯತೆಗಳ ಕುರಿತು ವಿವರಿಸಿದರು. ನಿವೃತ್ತ ಇತಿಹಾಸ ಪ್ರಾಧ್ಯಾಪಕಿ ಹಾಗೂ ಡಾ.ಗುರುರಾಜ ಭಟ್ಟರ ವಿದ್ಯಾರ್ಥಿನಿ ಡಾ.ಮಾಲತಿ ಕೃಷ್ಣಮೂರ್ತಿ ಅವರು ಗುರುಗಳ ಸಾಧನೆ, ಸಂಶೋಧನೆಗಳ ಕುರಿತು ವಿವರಿಸಿದರು.
ಟ್ರಸ್ಟ್‌ನ ಕಾರ್ಯದರ್ಶಿ ವಿಶ್ವನಾಥ ಪಾದೂರು ಅತಿಥಿಗಳನ್ನು ಸ್ವಾಗತಿಸಿದರೆ, ವೆಂಕಟೇಶ ಭಟ್, ಪಿ.ಪರಶುರಾಮ ಭಟ್, ರಘುಪತಿ ರಾವ್ ಮುಂತಾದವರು ಉಪಸ್ಥಿತರಿದ್ದರು.