ಕಾನೂನು ವ್ಯವಸ್ಥೆಯ ಆರೋಗ್ಯಕರ ಬೆಳವಣಿಗೆ ಕ್ರೀಡೆ ಸಹಕಾರಿ: ನ್ಯಾ.ಕಾಮೇಶ್ವರ್ ರಾವ್
ಉಡುಪಿ, ಮಾ.1: ವಕೀಲರು ಹಾಗೂ ನ್ಯಾಯಧೀಶರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ದೃಢತೆ ಹೊಂದಿ, ಕಾನೂನು ವ್ಯವಸ್ಥೆಯ ಆರೋಗ್ಯಕರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಹಾಗು ಹೈಕೋರ್ಟ್ ನ್ಯಾಯಮೂರ್ತಿ ಕಾಮೇಶ್ವರ್ ರಾವ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ನ್ಯಾಯವಾದಿಗಳು ಪ್ರಕರಣಗಳನ್ನು ಜಯಿಸಲು ಸಾಕಷ್ಟು ಅಧ್ಯಯನ, ಚಿಂತನೆ ನಡೆಸಬೇಕಾಗುತ್ತದೆ. ಅಂತೆಯೇ ನ್ಯಾಯಧೀಶರು ಉತ್ತಮವಾದ ತೀರ್ಪು ನೀಡಲು ಅಧ್ಯಯನ ನಡೆಸಬೇಕಾಗುತ್ತದೆ. ಇದರಿಂದ ಹೆಚ್ಚು ಒತ್ತಡಕ್ಕೆ ಒಳಗಾ ಗುತ್ತಾರೆ. ಇದನ್ನು ನಿವಾರಿಸಲು ಸುಲಭ ಮಾರ್ಗ ಅಂದರೆ ಕ್ರೀಡೆ. ಆದುದರಿಂದ ವಕೀಲರು ಇಂತಹ ಕ್ರೀಡಾಕೂಟದಲ್ಲಿ ನಿರಂತರವಾಗಿ ತೊಡಗಿಸಿ ಕೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯ ಮೂರ್ತಿ ಇ.ಎಸ್. ಇಂದಿರೇಶ್ ಮಾತನಾಡಿ, ವಕೀಲಿಕೆ ಎಂಬುದು ಒತ್ತಡದ ವೃತ್ತಿ. ಇದರಿಂದ ಮುಕ್ತವಾಗಲು ಪ್ರತಿದಿನ ವ್ಯಾಯಾಮ ಮಾಡಬೇಕು. ಇದರಿಂದ ವಕೀಲರ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ರಾಜೇಶ್ ರೈ ಕೆ. ಮಾತನಾಡಿ, ಕ್ರೀಡೆ ಮತ್ತು ನ್ಯಾಯಾಂಗ ವ್ಯವಸ್ಥೆ ಒಂದ ಕ್ಕೊಂದು ನೇರ ಸಂಬಂಧ ಹೊಂದಿದೆ. ವಕೀಲರು ಕ್ರೀಡೆಯಲ್ಲಿ ತೊಡಗಿಸಿಕೊಂಡಲ್ಲಿ ಅವರಲ್ಲಿನ ಕ್ರಿಯಾಶೀಲತೆ ಹೆಚ್ಚಾಗು ತ್ತದೆ. ಕ್ರೀಡೆಯಿಂದ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಮಾನವ ಹಕ್ಕುಗಳ ರಕ್ಷಣೆಯ ಮನೋಭಾವ ಮೂಡಲು ಸಾಧ್ಯ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಮ್.ಎಲ್. ರಘುನಾಥ್, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್, ವಕೀಲರ ಸಂಘದ ಉಪಾಧ್ಯಕ್ಷ, ಕ್ರೀಡಾಕೂಟದ ಸಂಚಾಲಕ ಮಿತ್ರಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ಹಿರಿಯ ನ್ಯಾಯವಾದಿ ಮೇರಿ ಎ.ಆರ್.ಶ್ರೇಷ್ಠಾ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ 39 ಕ್ರಿಕೆಟ್, 16 ವಾಲಿಬಾಲ್, 10 ತ್ರೋ ಬಾಲ್, 40 ಶಟಲ್ ಬ್ಯಾಡ್ಮಿಂಟನ್ ತಂಡಗಳು ಭಾಗವಹಿಸಿವೆ.