ಶೀರೂರು ಮಠದ ಪರ್ಯಾಯಕ್ಕೆ ಅಕ್ಕಿ ಮುಹೂರ್ತ
ಉಡುಪಿ, ಮಾ.6: 2026ರ ಜನವರಿ 18ರ ಮುಂಜಾನೆ ನಡೆಯುವ ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯ ಮಹೋತ್ಸವದಲ್ಲಿ ಮೊದಲ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಎರಡನೇ ಯದಾದ ಅಕ್ಕಿ ಮುಹೂರ್ತ ಇಂದು ಬೆಳಗ್ಗೆ ರಥಬೀದಿಯಲ್ಲಿರುವ ಶೀರೂರು ಮಠದಲ್ಲಿ ನಡೆಯಿತು.
ಶೀರೂರು ಮಠದಲ್ಲಿ ಭಾವಿ ಪರ್ಯಾಯ ಮಠಾಧೀಶರಾದ ಶ್ರೀವೇದವರ್ಧನತೀರ್ಥರು ಹಾಗೂ ಉಳಿದ ಆರು ಮಠಗಳ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮಠದ ಪುರೋಹಿತರು ಅಕ್ಕಿ ಮುಹೂರ್ತದ ಸಾಂಪ್ರದಾ ಯಿಕ ವಿಧಿವಿಧಾನಗಳನ್ನು ನೇರವೇರಿಸಿದರು. ಪರ್ಯಾಯ ನಡೆಯುವ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಅಕ್ಕಿ ಮುಹೂರ್ತ ಎರಡನೇಯದು. ಈಗಾಗಲೇ ಬಾಳೆ ಮುಹೂರ್ತ ನಡೆದಿದ್ದು, ಇನ್ನು ಮುಂದೆ ಕಟ್ಟಿಗೆ ಮುಹೂರ್ತ ಹಾಗೂ ಪರ್ಯಾಯಕ್ಕೆ ಒಂದು ತಿಂಗಳು ಮೊದಲು ಭತ್ತ ಮುಹೂರ್ತ ನಡೆಯಲಿಕ್ಕಿವೆ.
ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು, ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರು ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕಾಗಿ ಬೇಕಾದ ಅಕ್ಕಿ ಹಾಗೂ ಧಾನ್ಯಗಳನ್ನು ಸಂಗ್ರಹಿಸಿಡುವುದಕ್ಕಾಗಿ ಅಕ್ಕಿ ಮುಹೂರ್ತ ನಡೆಯುತ್ತದೆ. ಸಂಪ್ರದಾಯದಂತೆ ಇಂದು ಮುಂಜಾನೆ ರಥಬೀದಿಯಲ್ಲಿರುವ ಶೀರೂರು ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನವಗ್ರಹ ಪೂಜೆ ಹಾಗೂ ಪಟ್ಟದ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ಮಠದ ದಿವಾನರ ನೇತೃತ್ವದಲ್ಲಿ ಊರಿನ ಗಣ್ಯರು, ಮಠದ ಅಭಿಮಾನಿಗಳು ಸಕಲ ಬಿರುದು ಬಾವಲಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಚಂದ್ರಮೌಳೀಶ್ವರ, ಶ್ರೀಅನಂತೇಶ್ವರ ದೇವರಿಗೆ ಪಾರ್ಥಿಸಿ, ಬಳಿಕ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರಿಗೆ, ಸರ್ವಜ್ಞ ಪೀಠದಲ್ಲಿರುವ ಶ್ರೀಮಧ್ವಾಚಾ ರ್ಯರಿಗೆ, ವಾದಿರಾಜರಿಗೆ ಪಾರ್ಥಿಸಲಾಯಿತು.
ಬಳಿಕ ಶೀರೂರು ಮಠದಿಂದ ಮೆರವಣಿಗೆಯಲ್ಲಿ ಸಂಸ್ಕೃತ ಮಹಾವಿದ್ಯಾಲಯ ಬಳಿ ತೆರಳಿ ಅಲ್ಲಿ ಇರಿಸಿದ್ದ ಅಕ್ಕಿಮುಡಿಯನ್ನು ಪಲ್ಲಕ್ಕಿಯಲ್ಲಿರಿಸಿಕೊಂಡು ಬಿರುದು ಬಾವಲಿಗಳೊಂದಿಗೆ ರಥಬೀದಿಗೆ ಪ್ರದಕ್ಷಿಣೆ ಬಂದು ಶೀರೂರು ಮಠದಲ್ಲಿ ಪಟ್ಟದ ದೇವರು ಅನ್ನ ವಿಠಲನ ಎದುರು ಅಕ್ಕಿಮುಡಿಯನ್ನಿರಿಸಿ ಆರತಿ ಬೆಳಗುವ ಮೂಲಕ ಕಾರ್ಯಕ್ರಮ ಸಂಪನ್ನ ಗೊಂಡಿತು. ಬಳಿಕ ಆಗಮಿಸಿದ ಎಲ್ಲಾ ಮಠಗಳ ಶ್ರೀಪಾದರುಗಳಿಗೆ, ಶಾಖಾ ಮಠಗಳ ಪ್ರತಿನಿದಿಗಳಿಗೆ ಮಠದ ವತಿಯಿಂದ ಗೌರವ ಸಮರ್ಪಿಸಲಾಯಿತು.
ಶೀರೂರು ಮಠದ ಅಕ್ಕಿ ಮುಹೂರ್ತದ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ರಮೇಶ್ ಕಾಂಚನ್ ಮುಂತಾದವರು ಉಪಸ್ಥಿತರಿದ್ದರು.