ಸಹಕಾರಿ ಕ್ಷೇತ್ರದಲ್ಲೂ ಬಹೂದ್ದೇಶ ವ್ಯವಸ್ಥೆಗೆ ಕೇಂದ್ರ ಚಿಂತನೆ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ: ಈಗ ಠೇವಣಿ ಸಂಗ್ರಹ ಹಾಗೂ ಸಾಲ ನೀಡಿಕೆಗೆ ಮಾತ್ರ ಇರುವ ಸಹಕಾರಿ ಕ್ಷೇತ್ರದಲ್ಲೂ ಬಹೂದ್ದೇಶ ವ್ಯವಸ್ಥೆಯನ್ನು (ಮಲ್ಟಿ ಪರ್ಪಸ್ ಸಿಸ್ಟಮ್) ಅಳವಡಿಸಲು ಕೇಂದ್ರ ಸರಕಾರ ಕಾರ್ಯೋನ್ಮು ಖವಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹ ಕಾರ ಮಹಾಮಂಡಳದ ನಿರ್ದೇಶಕ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಬೆಂಗಳೂರಿನ ರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲೆಯ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಡಿಯಾಳಿಯ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಆಯೋಜಿಸಲಾದ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ದೇಶದ ಆರ್ಥಿಕ ವ್ಯವಸ್ಥೆಗೆ ಸಹಕಾರ ಕ್ಷೇತ್ರದ ಕೊಡುಗೆ ದೊಡ್ಡದಿದೆ. ಸಹಕಾರ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆಗಳು, ತಿದ್ದುಪಡಿಗಳು ಆಗುತ್ತಿವೆ. ಈ ಬಗ್ಗೆ ಎಲ್ಲಾ ಸಹಕಾರಿ ಸೊಸೈಟಿಗಳ ಸಿಇಓ ಗಳು, ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು ಮಾಹಿತಿಗಳನ್ನು ಹೊಂದಿರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಯೂನಿಯನ್ ಹಲವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿವೆ ಎಂದವರು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಒಳ್ಳೆಯ ಹೆಸರನ್ನು ಸಂಪಾದಿಸಿವೆ. ಆದರೆ ಸರಕಾರದ ಮಹತ್ವಾ ಕಾಂಕ್ಷಿ ಯಶಸ್ವಿನಿ ಯೋಜನೆಯಲ್ಲಿ ಮಾತ್ರ ಉಡುಪಿ ಜಿಲ್ಲೆ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. ಈ ಬಗ್ಗೆ ನಮ್ಮೆಲ್ಲಾ ಸಹಕಾರಿ ಸೊಸೈಟಿಗಳು ಹೆಚ್ಚು ಮುತುವರ್ಜಿ ವಹಿಸಿ, ಹೆಚ್ಚೆಚ್ಚು ನೊಂದಣಿ ಮಾಡುವಂತೆ ಅವರು ಕರೆ ನೀಡಿದರು.
ಉಡುಪಿಯ ಆದರ್ಶ ಆಸ್ಪತ್ರೆಯನ್ನೂ ಈಗ ಯಶಸ್ವಿನಿ ಯೋಜನೆಯಡಿ ತರಲಾಗಿದೆ ಎಂದು ಹೇಳಿದ ಅವರು, ಜಿಲ್ಲೆಯಲ್ಲೂ ಈ ಯೋಜನೆಯನ್ನು ಯಶಸ್ವಿಗೊಳಿಸಲು ಫಲಾನುಭವಿಗಳನ್ನು ನೊಂದಾಯಿಸಲು ಹೆಚ್ಚಿನ ಮುತುವರ್ಜಿ ವಹಿಸುವಂತೆ ತಿಳಿಸಿದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್.ಲಾವಣ್ಯ ಅವರು ಸಹಕಾರಿ ತತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಸಹ ಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತಿದ್ದರೂ, ಇಲ್ಲೂ ಕೆಲವು ನ್ಯೂನತೆಗಳನ್ನು ತಾನು ಗಮನಿಸಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದರು.
ಕುಂದಾಪುರ ವಿಭಾದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯ ಅವರು ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷ ಅಶೋಕ್‌ಕುಮಾರ್ ಬಲ್ಲಾಳ್, ನಿರ್ದೇಶಕರಾದ ಗಂಗಾಧರ ಶೆಟ್ಟಿ, ಪ್ರಸಾದ್ ಎಸ್.ಶೆಟ್ಟಿ, ಎನ್.ಮಂಜಯ್ಯ ಶೆಟ್ಟಿ, ಅನಿಲ್ ಪೂಜಾರಿ, ಬಿ.ಕರುಣಾಕರ ಶೆಟ್ಟಿ, ಎ.ಹರೀಶ್ ಕಿಣಿ, ಬಿ.ಅರುಣ್ ಕುಮಾರ್ ಹೆಗ್ಡೆ, ಶ್ರೀಧರ ಪಿ.ಎಸ್. ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿ, ಪ್ರಸ್ತಾವಿಕ ವಾಗಿ ಮಾತನಾಡಿದರು. ನಿರ್ದೇಶಕ ಶ್ರೀಧರ ಪಿ.ಎಸ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಚಂದ್ರ ಹಾಗೂ ಶಿವಮೊಗ್ಗದ ಸನ್ನದು ಲೆಕ್ಕಪರಿಶೋಧಕ ವರುಣ್ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.