×
Ad

ದೇಶದ ಸಮಸ್ಯೆ ಪರಿಹಾರ, ಸವಾಲು ಎದುರಿಸಲು ಸಂವಿಧಾನ ಒಂದೇ ದಾರಿ: ನ್ಯಾ.ನಾಗಮೋಹನ್‌ದಾಸ್

Update: 2025-03-08 18:19 IST

ಉಡುಪಿ, ಮಾ.8: ದೇಶದ ಸಮಸ್ಯೆಗಳ ಪರಿಹಾರ ಹಾಗೂ ಸವಾಲುಗಳನ್ನು ಎದುರಿಸಲು ನಮ್ಮ ಮುಂದೆ ಇರುವ ಒಂದೇ ದಾರಿ ಸಂವಿಧಾನ. ಅದಕ್ಕಾಗಿ ನಾವೆಲ್ಲರು ಸಂವಿಧಾನ ಅರಿಯಬೇಕು. ಆ ಮೂಲಕ ಸಂವಿಧಾನ ರಕ್ಷಣೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿ, ಸವಾಲುಗಳನ್ನು ಹಿಮ್ಮೆಟ್ಟಿಸಿ ದೇಶ ಎಲ್ಲ ಜನರು ನೆಮ್ಮದಿ ಬದುಕುವಂತೆ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದ್ದಾರೆ.

ಸಂವಿಧಾನ ಓದು ಅಭಿಯಾನ- ಕರ್ನಾಟಕ, ವಿಮಾ ನೌಕರರ ಸಂಘ ಉಡುಪಿ ವಿಭಾಗ ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಉಡುಪಿಯ ಎಲ್‌ಐಸಿ ಎಂಪ್ಲಾಯೀಸ್ ಕೋ ಆರಪೇಟಿವ್ ಸೊಸೈಟಿ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಂವಿಧಾನ ಜಾರಿಗೆ ಬಂದು 75 ವರ್ಷಗಳಾಗಿವೆ. ಈ ಅವಧಿಯಲ್ಲಿ ನಾವು ಬಹಳಷ್ಟು ಸಾಧನೆಯನ್ನು ಮಾಡಿದ್ದೇವೆ. ಈ ಸಾಧನೆಯ ಹೊರತಾಗಿಯೂ ದೇಶದ ಮುಂದೆ ಹಲವು ಸಮಸ್ಯೆಗಳು ಹಾಗೂ ಸವಾಲು ಗಳಿವೆ. ಇದಕ್ಕೆ ನಾವೇ ಕಾರಣ ಹೊರತು ಈ ದೇಶದ ಸಂವಿಧಾನ ಅಲ್ಲ. ಅದಕ್ಕಾಗಿ ನಾವು ನಮ್ಮಲ್ಲಿರುವ ದೋಷವನ್ನು ಸರಿಪಡಿಸಬೇಕು. ಅದು ಬಿಟ್ಟು ಸಂವಿಧಾನ ಅಪ್ರಸ್ತುತ, ಬದಲಾಯಿಸಬೇಕು ಎಂದು ಹೇಳು ವುದು ಸರಿಯಲ್ಲ. ಆದುದರಿಂದ ನಾವೆಲ್ಲ ಸಂವಿಧಾನವನ್ನು ಓದಿ ಅರ್ಥೈಸಿ ಅದರಂತೆ ಜೀವಿಸಬೇಕಿರು ವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ನಮ್ಮಲ್ಲಿ ಸಾವಿರಾರು ಕಾನೂನುಗಳಿವೆ. ಪ್ರತಿಯೊಬ್ಬರ ಪ್ರತಿಯೊಂದು ಚಟುವಟಿಕೆಗಳು ಕಾನೂನಿನ ಚೌಕಟ್ಟಿಗೆ ಒಳಪಡುತ್ತವೆ. ಹಾಗಾಗಿ ಪ್ರತಿ ಯೊಬ್ಬರು ಕೂಡ ಕಾನೂನು ಕನಿಷ್ಠ ಅರಿವು ಹೊಂದಿರಬೇಕು. ಅದರ ಜೊತೆ ಈ ಎಲ್ಲ ಕಾನೂನುಗಳ ತಾಯಿ ಸಂವಿಧಾನದ ತಿಳುವಳಿಕೆ ಕೂಡ ಬೇಕು. ಸಂವಿಧಾನ ರಕ್ಷಣೆಯ ಯೋಧರಾಗಿ ಪ್ರತಿಯೊಬ್ಬರು ಸಂವಿಧಾನವನ್ನು ಎಲ್ಲರಿಗೂ ತಿಳಿಸಬೇಕು ಮತ್ತು ಉಳಿಸಿ ಮುಂದುವರೆಸಬೇಕು ಎಂದು ಅವರು ತಿಳಿಸಿದರು.

ಕೇವಲ ಅಂಕ ಪಟ್ಟಿಯಿಂದ ಕೌಶಲ್ಯವನ್ನು ಅಳತೆ ಮಾಡಲು ಆಗಲ್ಲ. ಯಾರು ದಡ್ಡರಲ್ಲ, ಅವಕಾಶ ಸಿಕ್ಕಿ ದರೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಸಾಧನೆ ಮಾಡಲು ಸಾಧ್ಯ. ಆದರೆ ಇಂದಿನ ಸ್ಪಧಾರ್ಅತ್ಮಕ ಯುಗ ದಲ್ಲಿ ಉತ್ತಮ ಅಂಕ ತೆಗೆದು ಕೊಳ್ಳಬೇಕು ಮತ್ತು ಕೀಳರಿಮೆ ಬಿಟ್ಟು ಜಗತ್ತನ್ನು ಗೆಲ್ಲುತ್ತೇವೆ ಎಂಬ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಶಿಸ್ತು, ಶ್ರಮದಿಂದ ಏಕಾಗ್ರತೆಯಿಂದ ಎತ್ತರ ಬೆಳೆಯಲು ಸಾಧ್ಯ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ನವದೆಹಲಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಉಡುಪಿ ಮಹಿಳಾ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ.ನಿಕೇತನ ಮಾತನಾಡಿ ದರು. ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಎಂ., ಸಹಾಯಕ ನಿರ್ದೇಶಕ ರೋಷನ್ ಕುಮಾರ್, ಉಡುಪಿ ವಿಮಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂದರ್ ಉಪಸ್ಥಿತರಿದ್ದರು.

ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಟೀಚರ್ ಪತ್ರಿಕೆಯ ಸಂಪಾದಕ ಡಾ.ಉದಯ ಗಾಂವ್ಕರ್ ಕಾರ್ಯಕ್ರಮ ನಿರೂಪಿಸಿದರು. ಶಶಿಧರ ಗೊಲ್ಲ ವಂದಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News