×
Ad

ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪಹಲವೆಡೆ ದಿಢೀರ್ ಭೇಟಿ| ಎಪಿಎಂಸಿ, ಡಂಪಿಂಗ್ ಯಾರ್ಡ್‌ಗಳ ಪರಿಶೀಲನೆ

Update: 2025-03-08 18:21 IST

ಉಡುಪಿ, ಮಾ.8: ರಾಜ್ಯ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪಶನಿವಾರ ಬೆಳ್ಳಂಬೆಳಗ್ಗೆ ಉಡುಪಿಯ ಹಲವು ಕಡೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಕಾರಿ ವ್ಯವಸ್ಥೆಯಲ್ಲಿನ ಕೆಲವೊಂದು ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಉಪಲೋಕಾಯುಕ್ತರು, ಈ ಸಂಬಂಧ ಪ್ರಕರಣ ದಾಖಲಿಸಲು ಸೂಚಿಸಿದರು.

ಉಪಲೋಕಾಯುಕ್ತರು ಇತ್ತೀಚೆಗೆ ಬೆಂಕಿ ದುರಂತ ಸಂಭವಿಸಿದ ಬ್ರಹ್ಮಾವರ ದಲ್ಲಿರುವ ವಾರಂಬಳ್ಳಿ ಗ್ರಾಪಂಗೆ ಸಂಬಂಧಪಟ್ಟ ತ್ಯಾಜ್ಯ ವಿಲೇವಾರಿ ಘಟಕ, ಆದಿಉಡುಪಿ ಎಪಿಎಂಸಿ ಯಾರ್ಡ್ ಹಾಗೂ ಕಾಪು ಪುರಸಭೆಗೆ ಸಂಬಧಿಸಿದ ಡಂಪಿಂಗ್ ಯಾರ್ಡ್‌ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿಗಳಾದ ಡಾ.ಗಾನಾ ಪಿ.ಕುಮಾರ್, ಮಂಜುನಾಥ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು

ಪಿಡಿಓಗೆ ತೀವ್ರ ತರಾಟೆ: ವಾರಂಬಳ್ಳಿ ಗ್ರಾಪಂಗೆ ಸಂಬಂಧಪಟ್ಟ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ, ಉಪಲೋಕಾ ಯುಕ್ತರು, ಅತ್ಯಂತ ಬೇಜವಬ್ದಾರಿತನದಲ್ಲಿ ಕಸ ರಾಶಿ ಹಾಕಿರುವುದರಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಪಿಡಿಓ ಆದರ್ಶ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಅವರು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು.

ಯಾವುದೇ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳದೆ ಅಪಾಯಕಾರಿಯಾಗಿ ಕಸ ಸಂಗ್ರಹಿಸಲಾಗಿದೆ. ಸುಟ್ಟ ಕಸವನ್ನು ಇನ್ನೂ ತೆರವು ಮಾಡಿಲ್ಲ. ಇದಕ್ಕೆ ಮತ್ತೆ ಬೆಂಕಿ ಬಿದ್ದರೆ ಯಾರು ಜವಾಬ್ದಾರಿ. ತಕ್ಷಣವೇ ಇದನ್ನೆಲ್ಲ ತೆರವು ಮಾಡಬೇಕು ಎಂದು ಉಪಲೋಕಾಯುಕ್ತರು ಪಿಡಿಓಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂ ಪುರ, ಗ್ರಾಪಂ ಕಾರ್ಯದರ್ಶಿ ಶೇಖರ ನಾಯ್ಕ್ ಉಪಸ್ಥಿತರಿದ್ದರು.

ಮುಖ್ಯಾಧಿಕಾರಿ ವಿರುದ್ಧ ಕ್ರಮ: ಕಾಪು ಪುರಸಭೆಗೆ ಸಂಬಂಧಿಸಿದ ನಗರದಲ್ಲಿರುವ ಡಂಪಿಂಗ್ ಯಾರ್ಡಿಗೆ ಭೇಟಿ ನೀಡಿದ ಉಪಲೋಕಾಯುಕ್ತರು ಈ ಕುರಿತು ಪರಿಶೀಲನೆ ನಡೆಸಿದರು.

ತೆರೆದ ಜಾಗದಲ್ಲಿ ಕಸದ ರಾಶಿ ಕಂಡು ಆಶ್ಚರ್ಯ ವ್ಯಕ್ತಪಡಿಸಿದ ಉಪಲೋಕಾ ಯುಕ್ತರು, ಇದು ಸುತ್ತಮುತ್ತ ಲಿನ ಜನರಿಗೆ ಬಹಳ ದೊಡ್ಡ ಬೆದರಿಕೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಾರದ ಪುರಸಭೆ ಮುಖ್ಯಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದರು.

ಅದೇ ರೀತಿ ಆದಿಉಡುಪಿ ಎಪಿಎಂಸಿಗೆ ಭೇಟಿ ನೀಡಿದ ಬಿ.ವೀರಪ್ಪ, ಅಲ್ಲಿನ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳನ್ನು ಪರಿಶೀಲಿಸಿದರು. ನೀರಿನ ವ್ಯವಸ್ಥೆ ಇಲ್ಲದಿರುವ ಹಾಗೂ ಶೌಚಾಲಯದಲ್ಲಿ ನೈರ್ಮಲ್ಯ ಕಾಪಾಡದ ಬಗ್ಗೆ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಅವರು ಪೊಲೀಸರಿಗೆ ನಿರ್ದೇಶನ ನೀಡಿದರು.

ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ: ಉಪಲೋಕಾಯುಕ್ತ

‘ಪತ್ರಿಕಾ ವರದಿ ನೋಡಿ ಬೆಂಕಿ ಬಿದ್ದ ವಾರಂಬಳ್ಳಿ ಗ್ರಾಪಂನ ತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಶೀಲಿಸಿ ದ್ದೇವೆ. ಇಲ್ಲಿ ಬೆಂಕಿ ವಿಸ್ತರಿಸಿದ್ದರೆ ಮುಂದೆ ಎಲ್ಲ ಅಗಂಡಿಗಳು ಸುಟ್ಟು ಹೋಗುತ್ತಿತ್ತು. ಇದರ ಬಗ್ಗೆ ಅಧಿಕಾರಿ ಗಳು ತೆಗೆದುಕೊಂಡಿಲ್ಲ. ಕೂಡಲೇ ಸುಟ್ಟ ತ್ಯಾಜ್ಯಗಳನ್ನು ಶುಚಿ ಮಾಡಲು ತಿಳಸಿದ್ದೇನೆ. ಈ ಬಗ್ಗೆ ಪ್ರಕರಣ ಕೂಡ ದಾಖಲಿಸಲಾಗುವುದು ಎಂದು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ತಿಳಿಸಿದ್ದಾರೆ.

ಎಪಿಎಂಸಿಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲ. ಕುಡಿಯುವ ನೀರು ಮೂರು ತಿಂಗಳುಗಳಿಂದ ಬರುತ್ತಿಲ್ಲ. ಕಾಪು ಡಂಪಿಂಗ್ ಯಾರ್ಡ್ ಸುತ್ತಮುತ್ತಲಿನ ಜನರಿಗೆ ಬಹಳ ದೊಡ್ಡ ಬೆದರಿಕೆ ಯಾಗಿದೆ. ಇಲ್ಲಿ ಕೂಡ ಬೆಂಕಿ ಬೀಳಬಹುದು. ಮಳೆ ಬಂದರೆ ವಾಸನೆಯಲ್ಲಿ ಕುಳಿತು ಕೊಳ್ಳಲು ಆಗಲ್ಲ. ಮುಖ್ಯಾಧಿಕಾರಿ ಬರುವಂತೆ ತಿಳಿಸಿದರು ಬಂದಿಲ್ಲ. ಇದರ ವಿರುದ್ಧ ಕಾನೂನು ಬದ್ಧವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News