ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೈಟೆಕ್ ಲೈಬ್ರೇರಿಗಳ ನಿರ್ಮಾಣ: ಜಯವಿಭವ ಸ್ವಾಮಿ
ಉಡುಪಿ, ಮಾ.8: ಉಡುಪಿ ಅಜ್ಜರಕಾಡಿನಲ್ಲಿರುವ ಉಡುಪಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥ ಪರಿಚಲನಾ(ಲೈಬ್ರೇರಿ ಅಟೋಮೇಶನ್) ಹಾಗೂ ಓದುಗರಿಗೆ ಆನ್‌ಲೈನ್ ಎರವಲು ಸೇವೆ ಸೌಲಭ್ಯದ ಉದ್ಘಾಟನೆ ಶುಕ್ರವಾರ ನಡೆಯಿತು.
ಈ ಸೇವಾ ಸೌಲಭ್ಯಕ್ಕೆ ಚಾಲನೆ ನೀಡಿದ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತ ಜಯವಿಭವ ಸ್ವಾಮಿ ಮಾತನಾಡಿ, ಗ್ರಂಥಾಲಯ ಎಂದರೆ ದೇವಳವಿದ್ದಂತೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂತಹ ಹೈಟೆಕ್ ಲೈಬ್ರೇರಿಗಳ ವ್ಯವಸ್ಥೆಯಾಗಿದೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ನಿಧಿಯಲ್ಲಿ 35 ಕೋಟಿ ವೆಚ್ಚದಲ್ಲಿ ಹೈಟೆಕ್ ಲೈಬ್ರೇರಿ ನಿರ್ಮಾಣವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಅಧ್ಯಯನ ನಡೆಸಲು ಲೇಟೆಸ್ಟ್ ಪುಸ್ತಕಗಳ ಜೊತೆಗೆ ಹವಾನಿಯಂತ್ರಿಕ ಕೊಠಡಿಗಳನ್ನು ನಿರ್ಮಿಸಲು ಚಿಂತನೆ ನಡೆದಿದೆ. ಇದು ಒಂದು ತಿಂಗಳೊಳಗೆ ಕಾರ್ಯಗತಗೊಳ್ಳಲಿದೆ ಎಂದರು.
ಉಡುಪಿ, ಮಂಗಳೂರು, ಕರಾವಳಿ ಹಾಗೂ ಗುಲ್ಬರ್ಗ, ರಾಯಚೂರು, ಕೋಲಾರ ಮೊದಲಾದ ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ಕೂತುಕೊಂಡು ಓದಬೇಕು ಎನ್ನುವ ವಾತಾವರಣ ಕಲ್ಪಿಸಲಾಗುವುದು. ಉತ್ತಮ ಖುರ್ಚಿ, ಟೇಬಲ್ ಜೊತೆಗೆ ಸಾಧ್ಯವಾದರೆ ಏಸಿ ವ್ಯವಸ್ಥೆಯನ್ನು ಕೂಡಾ ಅಳವಡಿಸಲು ಸೂಚಿಸಿದ್ದೇನೆ. ಸ್ಥಳೀಯಾಡಳಿತ ನೀಡುವ ಸೆಸ್ ಸಂಗ್ರಹಣೆಯಲ್ಲಿ ಶೇ.60ರಷ್ಟು ಪುಸ್ತಕ ಖರೀದಿ ಮಾಡಬೇಕಾಗಿದೆ. ಇದರಲ್ಲಿ ಶೇ.20ರಷ್ಟು ಮೊತ್ತವನ್ನು ಓದುಗರು ಇಷ್ಟಪಟ್ಟ ಪುಸ್ತಕಗಳನ್ನು ತರಿಸಿಕೊಡಲು ಅವಕಾಶವಿದೆ ಎಂದರು.
ಜಿಲ್ಲಾ ಗ್ರಂಥಾಲಯದ ಉಪಾಧ್ಯಕ್ಷೆ ಹಾಗೂ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಓಪಾಕ್ ಸೌಲಭ್ಯವನ್ನು ಉಡುಪಿ ನಗರಕೇಂದ್ರ ಗ್ರಂಥಾಲಯದಲ್ಲಿ ಪ್ರಾರಂಭಿಸಿರುವುದರಿಂದ ಓದುಗರಿಗೆ ಹೆಚ್ಚಿನ ಅನುಕೂಲ ವಾಗಲಿದೆ. ನಾವು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಇಂತಹ ಸೌಲಭ್ಯಗಳಿದ್ದರೆ ಬದುಕಿನಲ್ಲಿ ಹೆಚ್ಚಿನ ದ್ದನ್ನು ಸಾಧಿಸುವ ಅವಕಾಶ ಸಿಗುತ್ತಿತ್ತು. ಆದರೆ ಇಂದಿನ ಯುವ ಪೀಳಿಗೆಗೆ ಇಂತಹ ಹೈಟೆಕ್ ಸೌಲಭ್ಯ ಸಿಕ್ಕಿದೆ. ಪ್ರಮುಖವಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಇಲ್ಲಿನ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ವಹಿಸಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಎಂ. ಉಪಸ್ಥಿತರಿದ್ದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿದರು. ಗ್ರಂಥ ಪಾಲಕಿ ರಂಜಿತಾ ಸಿ. ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕಿ ಶಕುಂತಳಾ ಕುಂದರ್ ವಂದಿಸಿದರು.