×
Ad

ದಲಿತರ ಗಾಂಧಿ ಭವನ ಹಸ್ತಾಂತರಿಸದಂತೆ ಉಡುಪಿ ಜಿಲ್ಲಾಧಿಕಾರಿಗೆ ಮನವಿ

Update: 2025-03-08 20:42 IST

ಉಡುಪಿ, ಮಾ.8: ಉಡುಪಿ ನಗರಸಭೆಯಿಂದ ದಲಿತರ ಮೀಸಲು ಹಣದಲ್ಲಿ ನಿರ್ಮಾಣಗೊಂಡಿದ್ದ ಬನ್ನಂಜೆಯ ಗಾಂಧಿ ಭವನವನ್ನು ಬೇರೆ ಘಟಕಕ್ಕೆ ಹಸ್ತಾಂತರಿಸದಂತೆ ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಮೂಲಕ ಜಿಲ್ಲಾಧಿಕಾರಿಗೆ ದಸಂಸ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

1984ರಲ್ಲಿ ನಗರಾಭಿವೃದ್ಧಿ ಸಚಿವ ಚಂದ್ರಶೇಖರ್ ಅವರಿಂದ ಪರಿಶಿಷ್ಟ ವರ್ಗದವರಿಗಾಗಿ ಗಾಂಧಿ ಭವನಕ್ಕೆ ಶಿಲಾನ್ಯಾಸಗೊಂಡಿದ್ದು, 1985ರಂದು ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾಗಿದ್ಧ ಪ್ರೊಫೆಸರ್ ಲಕ್ಷ್ಮೀಸಾಗರ್ ಈ ಗಾಂಧಿ ಭವನವನ್ನು ಉದ್ಘಾಟಿಸಿ ನಗರಸಭೆ ವ್ಯಾಪ್ತಿಯ ದಲಿತರ ಸಭೆ ಸಮಾರಂಭಕ್ಕೆ ನೀಡಿದ್ದರು.

ಕಳೆದ 90ವರ್ಷಗಳಿಂದ ಲಕ್ಷ್ಮೀನಾರಾಯಣ ಭಜನಾ ಮಂಡಳಿಯಾಗಿದ್ದ ಈ ಜಾಗದಲ್ಲಿ ಗಾಂಧಿ ಭವನ ನಿರ್ಮಾಣಗೊಂಡ ಬಳಿಕ, ದಲಿತರ ಸಭೆ- ಸಮಾರಂಭ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸುಮಾರು 40 ವರ್ಷಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲೆಯ ದಲಿತರ ಕುಂದುಕೊರತೆ ಸಭೆ ನಡೆಸಿಕೊಂಡು ದಲಿತ ಚಳವಳಿಯನ್ನು ಕಟ್ಟಿರುವುದು ಇತಿಹಾಸ ಎಂದು ಜಯನ್ ಮಲ್ಪೆತಿಳಿಸಿದರು.

ಈ ನಡೆವೆ ಗಾಂಧಿ ಭವನದ ಕಟ್ಟಡದ ನಿರ್ವಾಹಣೆಗೆ ಉಡುಪಿ ನಗರಸಭೆ ಹಣ ನೀಡದೆ ಇರುವುದರಿಂದ ಕಟ್ಟಡ ಶೀತಲೀಕರಣಗೊಂಡು ಸಭೆ ಸಮಾರಂ ನಡೆಸುವುದು ಅಸಾಧ್ಯವಾಯಿತು. ಜಿಲ್ಲಾಡಳಿತ ಕೂಡ ಈ ಭವನವನ್ನು ಬೇರೆ ಬೇರೆ ಕಾರ್ಯಕ್ರಮಕ್ಕೆ ಉಪಯೋಗಿಸಿ ಸರಿಯಾದ ನಿರ್ವಾಹಣೆ ಇಲ್ಲದೆ ಕಟ್ಟಡ ಪಾಲುಬಿದ್ದಿತ್ತು ಎಂದು ಮನವಿಯಲ್ಲಿ ದೂರಲಾಗಿದೆ.

ಜಿಲ್ಲಾಧಿಕಾರಿಗಳು ಉಡುಪಿ ನಗರಸಭೆಯಿಂದ ಈ ಗಾಂಧಿಭವನದ ಬಗ್ಗೆ ನಿರ್ಣಯ ಪಡೆಯದೆ, ಸರ್ವಾಧಿ ಕಾರಿಯಾಗಿ ಮತ್ತು ಸಂವಿಧಾನ ವಿರೋಧಿ ಯಾಗಿ ದಲಿತರ ಹಕ್ಕನ್ನು ಕಸಿದುಕೊಂಡು ಉಡುಪಿಯ ಸಂಜೀವನಿ ಜೀವನೋಪಾಯ ಪ್ರಚಾರ ಮತ್ತು ಮಾರ್ಕೆಟಿಂಗ್ ಸೊಸೈಟಿ, ಮಹಿಳಾ ಸ್ವಸಹಾಯ ಸಂಘಕ್ಕೆ ಹಾಗೂ ಹಿರಿಯ ನಾಗರಿಕ ಸಮಾಲೋಚನೆ ಘಟಕಕ್ಕೆ ಹಸ್ತಾಂತರಿಸಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆದೇಶಿಸಿರುವುದು ಜಿಲ್ಲೆಯ ದಲಿತ ಸಮುದಾಯಕ್ಕೆ ಮಾಡಿದ ಮಹಾ ದ್ರೋಹ ಎಂದಿರುವ ಜಯನ್ ಮಲ್ಪೆ, ತಕ್ಷಣ ಈ ಆದೇಶವನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ದಲಿತ ಮುಖಂಡರಾರ ಗಣೇಶ್ ನೆರ್ಗಿ, ಹರೀಶ್ ಸಲ್ಯಾನ್, ಭಗವಾನ್ ಮಲ್ಪೆ, ಸುಕೇಶ್ ನಿಟ್ಟೂರು, ಭಾಸ್ಕರ್ ಬಿ., ಶಂಕರ್ ಬನ್ನಂಜೆ, ನಾರಾಯಣ, ಮಂಜುನಾಥ, ವಾಸು ಬನ್ನಂಜೆ, ಗೋವಿಂದ ಬನ್ನಂಜೆ, ಪ್ರಸಾದ್ ಮಲ್ಪೆ, ಅಶೋಕ್ ನಿಟ್ಟೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News