ಕಾನೂನು ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಫುಲ ಅವಕಾಶ: ನ್ಯಾ.ಸುಮಲತಾ
ಉಡುಪಿ, ಮಾ.16: ಕಾನೂನು ಕ್ಷೇತ್ರದಲ್ಲಿ ಮಹಿಳೆಯರಿಗೆ ಹಲವಾರು ಅವಕಾಶಗಳಿದ್ದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಯಶಸ್ಸು ಎಂಬುವುದು ಸುಲಭದಲ್ಲಿ ಸಿಗುವುದಿಲ್ಲ. ಕಠಿಣ ಪರಿಶ್ರಮ, ಶೃದ್ಧೆಯಿಂದ ಸಾಧನೆ ಮಾಡಲು ಸಾಧ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಾ.ಚಿಲ್ಲಾಕೂರ್ ಸುಮಲತಾ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಿವಿಧ ವೃತ್ತಿ ಕ್ಷೇತ್ರಗಳಲ್ಲಿಯೂ ಮಹಿಳೆಯ ಪಾತ್ರ ಹಿರಿದಾಗಿದೆ. ಮಹಿಳೆಯರು ತುಂಬಾ ಪರಿಶ್ರಮ ಪಟ್ಟು, ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಾರೆ. ಮಹಿಳೆಯರಲ್ಲಿ ಛಲವೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ. ಇದು ಸ್ಪರ್ಧಾತ್ಮಕ ಕ್ಷೇತ್ರವಾಗಿದ್ದು, ಎಲ್ಲರನ್ನೂ ಸಮಾನವಾಗಿ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್.ಎಸ್. ಗಂಗಣ್ಣನವರ್ ವಹಿಸಿದ್ದರು. ಇತ್ತೀಚೆಗೆ ಅಗಲಿದ ಉಡುಪಿ ವಕೀಲರ ಸಂಘದ ಸದಸ್ಯ ಸುಲತಾ ಅವರ ಕುಟುಂಬಕ್ಕೆ ಮಹಿಳಾ ವಕೀಲರಿಂದ ಸಹಾಯಧನ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಯಾಗಿ ಹೈಕೋರ್ಟಿನ ಹಿರಿಯ ನ್ಯಾಯವಾದಿ ಎಸ್.ಬಸವರಾಜ್ ಮಾತನಾಡಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ಉಪಸ್ಥಿತರಿದ್ದರು. ವಕೀಲರ ಸಂಘದ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು.
ನ್ಯಾಯವಾದಿ ದೀಪಾ ಸುವರ್ಣ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಜಿಲ್ಲಾ ಸರಕಾರ ವಕೀಲೆ ಮೇರಿ ಎ.ಆರ್.ಶ್ರೇಷ್ಠಾ, ನ್ಯಾಯವಾದಿ ಗಿರೀಶ್ ಎಸ್.ಪಿ. ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಚಾಲಕಿ ಲವೀನಾ ಫೆರ್ನಾಂಡೀಸ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.