×
Ad

ಜಾತ್ಯತೀತ ಶಕ್ತಿಗಳು ಇನ್ನಷ್ಟು ಬಲಗೊಳ್ಳುವುದು ಇಂದಿನ ಅಗತ್ಯ: ವಿನಯ ಕುಮಾರ್ ಸೊರಕೆ

Update: 2025-03-25 19:46 IST

ಉಡುಪಿ, ಮಾ.25: ಕೆಲವು ಶಕ್ತಿಗಳು ರಾಜಕೀಯ ಲಾಭಕ್ಕಾಗಿ ಧರ್ಮಗಳ ಮಧ್ಯೆ ಧ್ವೇಷವನ್ನು ಹರಡುವ ಕಾರ್ಯ ಮಾಡುತ್ತಿದೆ. ಅದನ್ನು ಧಮನ ಮಾಡಲು ನಾವು ಜಾತ್ಯತೀತ ಶಕ್ತಿಗಳನ್ನು ಇನ್ನಷ್ಟು ಬಲಪಡಿಸ ಬೇಕಾದ ಅಗತ್ಯ ಇದೆ. ಆಗ ಮಾತ್ರ ಸಾಮರಸ್ಯದ ಬದುಕು ನಡೆಸಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಡುಪಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಗ್ರಹಣ ಹಾಗೂ ಸೌಹಾರ್ದ ಇಫ್ತಾರ್ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಎಲ್ಲ ಧರ್ಮಗಳು ಮನುಷ್ಯ ಮನುಷ್ಯರಾಗಿ ಬದುಕು ವಂತಹ ಉತ್ತಮ ಸಂದೇಶ ನೀಡಿದೆ. ಇಂದು ನಮ್ಮ ದೇಶಕ್ಕೆ ಎಲ್ಲ ಧರ್ಮದವರು ಪರಸ್ಪರ ಅನೋನ್ಯರಾಗಿ ಸೌಹಾರ್ದತೆಯಿಂದ ಬದುಕು ನಡೆಸುವುದು ಬೇಕಾಗಿದೆ. ಯಾವ ಧರ್ಮ ಕೂಡ ಹಿಂಸೆಯನ್ನು ಬೋಧಿಸುವುದಿಲ್ಲ. ಧರ್ಮಗಳು ಶಾಂತಿಯ ಸಂದೇಶ ವನ್ನು ಸಾರುತ್ತವೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಫಾ.ವಿಲಿಯಂ ಮಾರ್ಟಿಸ್, ಇಸ್ಮಾಯಿಲ್ ಆತ್ರಾಡಿ, ನಕ್ವಾ ಯಾಹ್ಯ, ಮುಷ್ತಾರ್ ಅಹ್ಮದ್ ಬೆಳ್ವೆ, ಮುಹಮ್ಮದ್ ಮೌಲಾ, ಮುಶ್ತಾಕ್ ಹೆನ್ನಾಬೈಲು, ಅಮೃತ್ ಶೆಣೈ, ಪ್ರಶಾಂತ್ ಜತ್ತನ್ನ, ಹಬೀಬ್ ಅಲಿ, ಮುಹಮ್ಮದ್ ಗುಲ್ವಾಡಿ ವೇದಿಕೆಯಲ್ಲಿ ಗೀತಾ ವಾಗ್ಳೆ, ರಮೇಶ್ ಕಾಂಚನ್, ಶಿವಾಜಿ ಸುವರ್ಣ, ನವೀನ್‌ಚಂದ್ರ ಶೆಟ್ಟಿ, ಸೌರಭ್ ಬಲ್ಲಾಳ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ವಿತರಿಸಲಾಯಿತು. ಕಾಪು ಪೊಲಿಪು ಮಸೀದಿಯ ಖತೀಬ್ ಇರ್ಷಾದ್ ಸಅದಿ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News