×
Ad

ಟ್ರಸ್ಟ್ ನಕಲಿ ದಾಖಲೆ ಸೃಷ್ಟಿಸಿದ್ದರೆ ತನಿಖೆಯಾಗಲಿ: ಗೋಪಾಲ ಪೂಜಾರಿ

Update: 2025-04-27 19:47 IST

ಕುಂದಾಪುರ, ಎ.27: ಕೊಲ್ಲೂರು ಗ್ರಾಮದ ಕಲ್ಯಾಣಿ ಗುಡ್ಡೆ ಎಂಬಲ್ಲಿ ಕಳೆದ ಸುಮಾರು 4 ದಶಕಗಳಿಂದ ಮನೆ ಕಟ್ಟಿಕೊಂಡು ಕಷ್ಟದ ಬದುಕು ನಡೆಸುತ್ತಿದ್ದ ಕೊರಗ ಸಮುದಾಯದ ಗಂಗಾ ಎಂಬವರ ಮನೆಯನ್ನು ದ್ವಂಸ ಮಾಡಿರುವ ಸ್ಥಳಕ್ಕೆ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ರವಿವಾರ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಅತ್ಯಂತ ಹೇಯ ಹಾಗೂ ಖಂಡನೀಯ ಕೃತ್ಯ. ವಿಚಾರ ತಿಳಿಸಿದ ಕೂಡಲೇ, ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಬಡ ವಿಧವೆ ಮಹಿಳೆಗೆ ಆಗಿರುವ ಅನ್ಯಾಯ ವನ್ನು ವಿವರಿಸಿದ್ದೆ. ಅದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿಗಳು ಮನೆ ಕೆಡವಲು ಕಾರಣರಾದವರಿಂದಲೇ ಮನೆ ನಿರ್ಮಾಣ ಮಾಡಿಸುವ ಹಾಗೂ ನೊಂದ ಮಹಿಳೆಗೆ ನ್ಯಾಯ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದರು.

ಗಂಗಾ ಅವರು ಮನೆ ಕಟ್ಟಿಕೊಂಡಿರುವ ಜಾಗಕ್ಕೂ, ಖಾಸಗಿ ಟ್ರಸ್ಟ್ನವರು ಹೇಳುವ ಜಾಗಕ್ಕೂ ತಾಳ-ತಂತಿಯೇ ಇಲ್ಲ. ಮಹಿಳೆ ವಾಸ್ತವ್ಯ ಹೂಡಿದ್ದ ಸರ್ವೇ ನಂಬ್ರ 121ರಲ್ಲಿ ಸಾವಿರಾರು ಎಕ್ರೆ ಸರಕಾರಿ ಭೂಮಿ ಇದೆ. ಖಾಸಗಿ ಟ್ರಸ್ಟ್‌ನವರು ಹೇಳುವ ಜಾಗದ ಸರ್ವೇ ನಂಬ್ರ ಇಲ್ಲಿದ್ದಲ್ಲ ಎಂದು ಸ್ಥಳೀಯರು ಹೇಳುತ್ತಿ ದ್ದಾರೆ. ಒಂದು ವೇಳೆ ನಕಲಿ ದಾಖಲೆ ಸೃಷ್ಟಿಸಿ ಸುಳ್ಳು ಹೇಳಿದ್ದರೇ, ಈ ಕುರಿತು ಸಮಗ್ರ ತನಿಖೆ ಆಗಬೇಕು. ಯಾವುದೇ ನಿರ್ದಿಷ್ಟ ಸಾಮಾಜಿಕ ಕಾಳಜಿಯ ಉದ್ದೇಶವಿಲ್ಲದೆ ಖಾಸಗಿ ಟ್ರಸ್ಟ್‌ಗೆ ನೀಡಿರುವ ಸರಕಾರಿ ಭೂಮಿಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಗಂಗಾ ಅವರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಮನೆ ಧ್ವಂಸ ಆಗುವ ಸಂದರ್ಭದಲ್ಲಿ ಆಗಿರುವ ನಷ್ಟವನ್ನು ಸಂಬಂಧಿಸಿದವರಿಂದ ಭರಿಸಲು, ಜಿಲ್ಲಾಡಳಿತ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸರ್ವೇ ನಂಬ್ರ 121 ರಲ್ಲಿ ಇರುವ ಸರ್ಕಾರಿ ಭೂಮಿಗಳನ್ನು ಗುರುತಿಸಲು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆಸಿ, ಅತಿಕ್ರಮಣವಾಗಿರುವ ಹಾಗೂ ಪರಭಾರೆ ಮಾಡಿರುವ ಸರ್ಕಾರಿ ಆಸ್ತಿಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು. ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಅಭಿವೃದ್ಧಿ ಕಾರ್ಯ ಗಳಿಗೆ ಅಗತ್ಯವಾಗಿರುವ ಭೂಮಿಯನ್ನು ದೇವಳಕ್ಕೆ ನೀಡಬೇಕು ಹಾಗೂ ಉಳಿದ ಭೂಮಿಯನ್ನು ಸರ್ಕಾರದ ಇತರೇ ಉದ್ದೇಶಗಳಿಗೆ ಮೀಸಲಿಡುವಂತೆ ಮುಖ್ಯಮಂತ್ರಿಗಳನ್ನ, ಉಪ ಮುಖ್ಯಮಂತ್ರಿಗಳನ್ನ, ಕಂದಾಯ ಹಾಗೂ ಮುಜರಾಯಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಲ್ಲೂರು ಪೊಲೀಸ್ ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ, ಸ್ಥಳೀಯ ಪ್ರಮುಖರಾದ ಹರೀಶ್ ತೋಳಾರ್ ಕೊಲ್ಲೂರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅರುಣ್ ಕುಮಾರ ಶೆಟ್ಟಿ, ವಿನಾಯಕ ಆಚಾರ್, ಸುರೇಶ್ ಪೂಜಾರಿ ದಳಿ, ಹರೀಶ್ ಸಿ.ವಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News