×
Ad

ಉಡುಪಿ ಜಿಲ್ಲೆಯ ಪ್ರಗತಿಯಲ್ಲಿ ಕುಂಠಿತ ಆಗಿಲ್ಲ: ಅಶೋಕ್ ಕೊಡವೂರು

Update: 2025-05-19 18:14 IST

ಉಡುಪಿ, ಮೇ 19: ರಾಜ್ಯ ಸರಕಾರ ಎರಡು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ವಿಜಯ ನಗರ ಜಿಲ್ಲೆಯ ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿರುವ ಸಮರ್ಪಣಾ ಸಂಕಲ್ಪ ಸಮಾವೇಶದಲ್ಲಿ ಎರಡೂ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಐದು ಸ್ಥಾನ ಕಳೆದುಕೊಂಡರೂ ಇಲ್ಲಿನ ಶಾಸಕರೂ ಆರೋಪಿಸುವಂತೆ ಉಡುಪಿ ಜಿಲ್ಲೆಯ ಪ್ರಗತಿಯಲ್ಲಿ ಯಾವುದೇ ಕುಂಠಿತ ಆಗಿಲ್ಲ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಮೂಲಕ ಈವರೆಗೆ ಸುಮಾರು 1688 ಕೋಟಿ ರೂ. ಜನ ಸಾಮಾನ್ಯರಿಗಾಗಿ ವ್ಯಯ ಮಾಡಲಾಗಿದೆ ಎಂದರು.

ಶಕ್ತಿ ಯೋಜನೆಯಲ್ಲಿ 2.5ಕೋಟಿ ಜನರು ಪ್ರಯಾಣಿಸಿದ್ದು, ಅದಕ್ಕಾಗಿ 92ಕೋಟಿ ರೂ. ವೆಚ್ಚ ಮಾಡಲಾ ಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ 2,35517 ಮಂದಿ ಫಲಾನುಭವಿಗಳಿಗೆ 870ಕೋಟಿ ರೂ. ನೀಡಲಾ ಗಿದೆ. ಗೃಹಜ್ಯೋತಿ ಯೋಜನೆ ಮೂಲಕ 295680 ಮನೆಗಳಿಗೆ ವಿದ್ಯುತ್ ಒದಗಿಸಿ 440ಕೋಟಿ ರೂ. ವ್ಯಯ ಮಾಡಲಾಗಿದೆ. ಅನ್ನಭಾಗ್ಯದ ಮೂಲಕ 1.92ಲಕ್ಷ ಪಡಿತರ ಚೀಟಿದಾರರಿಗೆ 266 ಕೋಟಿ ರೂ. ಖರ್ಚು ಮಾಡಲಾಗಿದೆ. ಯುವನಿಧಿಗೆ 2687 ಮಂದಿ ನೋಂದಾವಣಿ ಮಾಡಿದ್ದು, ಅವರಿಗೆ 4ಕೋಟಿ ರೂ. ಹಣ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಲಾವಣ್ಯ ಬಲ್ಲಾಳ್ ಮಾತನಾಡಿ, ಕಾಂಗ್ರೆಸ್ ಸರಕಾರ ಎರಡು ವರ್ಷ ಅವಧಿಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಜಿಎಸ್‌ಡಿಪಿ ಬೆಳವಣಿಗೆ ಯಲ್ಲಿ ಒಂದನೇ ಮತ್ತು ತೆರಿಗೆ ಸಂಗ್ರಹ ಹಾಗೂ ವಿದೇಶಿ ಬಂಡಾವಳ ಹೂಡಿಕೆಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ. ಕಾಂಗ್ರೆಸ್ ಸರಕಾರದ ಜಾತಿ ಗಣತಿ ಮಾದರಿಯನ್ನು ಕೇಂದ್ರ ಸರಕಾರ ದೇಶಾದ್ಯಂತ ಜಾರಿ ಮಾಡಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ವಕ್ತಾರ ಬಿಪಿನ್‌ಚಂದ್ರ ನಕ್ರೆ, ಜಿಲ್ಲಾ ಉಪಾಧ್ಯಕ್ಷ ಮಹಾಬಲ ಕುಂದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News