ವಿಶೇಷ ಕಾರ್ಯ ಪಡೆಗೆ ಸೇರ್ಪಡೆಯಿಂದ ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆ ಇಲ್ಲ: ಗೃಹ ಸಚಿವ ಡಾ.ಪರಮೇಶ್ವರ್
ಉಡುಪಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ, ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕೋಮು ಸಂಘರ್ಷಗಳ ತಡೆಗಾಗಿ ವಿಶೇಷ ಕಾರ್ಯಪಡೆಯನ್ನು (ಎಸ್‌ಎಎಫ್) ರಚಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವುದೇ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ನಾವಿದನ್ನು ಮಾಡಿಲ್ಲ. ಇದರ ಅಗತ್ಯ ಎಲ್ಲೂ ಬಾರದಿರಲಿ ಎಂದು ನಾನು ಈಗಾಗಲೇ ಹೇಳಿದ್ದೇನೆ. ಇದರಿಂದ ಉಡುಪಿ ಜಿಲ್ಲೆಯ ಘನತೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಸಂಜೆ ಕೊಲ್ಲೂರಿನಲ್ಲಿ ವಾಸ್ತವ್ಯ ಮಾಡಿ ಇಂದು ಬೆಳಗ್ಗೆ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉಡುಪಿಗೆ ಆಗಮಿಸಿದ ಡಾ.ಪರಮೇಶ್ವರ್, ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋಮು ನಿಗ್ರಹಕ್ಕಾಗಿರುವ ವಿಶೇಷ ಕಾರ್ಯ ಪಡೆಗೆ ಉಡುಪಿ ಜಿಲ್ಲೆಯ ಸೇರ್ಪಡೆಯನ್ನು ವಿರೋಧಿಸಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಇದರಿಂದ ಜಿಲ್ಲೆಯ ಘನತೆಗೆ ಧಕ್ಕೆಯಾಗಿದೆ ಎಂದು ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.
ಎಸ್‌ಎಎಫ್‌ನ ಉದ್ಘಾಟನೆಯ ಸಂದರ್ಭದಲ್ಲೇ ಈ ಪಡೆಯ ಉಪಯೋಗ ಆಗದಿರುವಂತೆ ನೋಡಿಕೊಳ್ಳಿ ಅಂತ ಸಾರ್ವಜನಿಕರಿಗೂ ನಾನು ಮನವಿ ಮಾಡಿದ್ದೇನೆ. ಕೋಮುವಾದಕ್ಕೆ ಸಂಬಂಧಪಟ್ಟ ಘಟನೆ ನಡೆಯದಿದ್ದಲ್ಲಿ ಈ ಕಾರ್ಯಪಡೆಯ ಅಗತ್ಯವೇ ಬರೋದಿಲ್ಲ. ಇದರ ಅಗತ್ಯ ಇದೆ ಅಥವಾ ಇಲ್ಲ ಅನ್ನೋದನ್ನ ಸಾರ್ವಜನಿಕರೇ ನಿರ್ಧಾರ ಮಾಡಬೇಕು. ಇದರ ಅಗತ್ಯ ಬರದಿದ್ದಲ್ಲಿ ಕೋಮುವಾದ ಸಂಪೂರ್ಣ ಇಲ್ಲವಾಗಿದೆ ಅಂಥ ಅರ್ಥ ಅಲ್ವ ಎಂದವರು ನಗುತ್ತಾ ಪ್ರಶ್ನಿಸಿದರು.
ಇಲ್ಲಿ ಯಾರದೇ ಘನತೆಗೆ ಧಕ್ಕೆ ಬರುವ ವಿಚಾರವೇ ಇಲ್ಲ. ನಕ್ಸಲರ ನಿಗ್ರಹಕ್ಕಾಗಿ ಕಾರ್ಕಳ ಭಾಗದಲ್ಲಿ ಎಎನ್‌ಎಫ್ ಮುಖ್ಯ ಕಚೇರಿ ಮಾಡಿದ್ದೆವು. ಎಎನ್‌ಎಫ್‌ನಿಂದ ಉಡುಪಿಯ ಘನತೆ ಕಡಿಮೆಯಾಯಿತಾ? ಎಂದ ಅವರು, ನಕ್ಸಲರಿಂದ ಬಹಳಷ್ಟು ಜನರ ಹತ್ಯೆ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಎಎನ್‌ಎಫ್ ಕಚೇರಿ ಆರಂಭಿಸಿದ್ದೆವು. ಇದರಿಂದ ಉಡುಪಿ ಜನಸಮುದಾಯದ ಘನತೆಗೆ ಧಕ್ಕೆ ಆಗಿಲ್ಲ ಎಂದು ಗೃಹ ಸಚಿವರು ಸಮಜಾಯಿಷಿ ನೀಡಿದರು.
ಪೊಲೀಸ್ ವ್ಯವಸ್ಥೆ ಇದೆ ಎಂದ ಮಾತ್ರಕ್ಕೆ ಘನತೆಗೆ ಧಕ್ಕೆ ಆಗುತ್ತಾ? ಕಾನೂನು ವ್ಯವಸ್ಥೆಯ ಸುರಕ್ಷಿತೆಗೆ ರಾಜ್ಯದಲ್ಲಿ, ದೇಶದಲ್ಲಿ ಪೊಲೀಸ್ ವ್ಯವಸ್ಥೆ ಇದೆ. ಇದರಿಂದ ಊರಿಗೆ ಅವಮಾನವಾಗುತ್ತಾ ಎಂದು ಮರು ಪ್ರಶ್ನಿಸಿದರು.
ಕಾರ್ಯಪಡೆಯ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿಯನ್ನು ಕಮಿಷನರ್ ನೋಡಿಕೊಳ್ತಾರೆ. ಐಜಿ ಅವರು ಉಡುಪಿ, ಶಿವಮೊಗ್ಗ ಸೇರಿದಂತೆ ಮೂರು ಜಿಲ್ಲೆಗಳನ್ನು ಮಾನಿಟರ್ ಮಾಡ್ತಾರೆ. ಅವರ ಕರ್ತವ್ಯ, ಕೆಲಸಗಳ ಬಗ್ಗೆ ಎಸ್‌ಓಪಿ ಇದೆ. ಅದರಂತೆ ಕೆಲಸ ಮಾಡುತ್ತಾರೆ ಎಂದರು.
ಸದ್ಯಕ್ಕೆ ಇದು ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಬೇರೆ ಜಿಲ್ಲೆಗಳಿಗೆ ಅಗತ್ಯವಿಲ್ಲ ಎಂದು ಭಾವಿಸಿದ್ದೇವೆ. ಅಗತ್ಯ ಬಿದ್ದರೆ ಅಲ್ಲೂ ಕೂಡಾ ವಿಶೇಷ ಕಾರ್ಯ ಪಡೆ ರಚಿಸುತ್ತೇವೆ ಎಂದು ಪರಮೇಶ್ವರ ಸ್ಪಷ್ಟಪಡಿಸಿದರು.
ಕೊಲ್ಲೂರು ಭೇಟಿ: ಕೊಲ್ಲೂರು ಭೇಟಿಯ ಕುರಿತು ಗೃಹ ಸಚಿವರನ್ನು ಪ್ರಶ್ನಿಸಿದಾಗ, ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನನ್ನ ವೈಯುಕ್ತಿಕ ವಿಚಾರ. ದಿಸ್ ಈಸ್ ನಾಟ್ ಅಫೀಶಿಯಲ್ ಎಂದ ಅವರು, ಈ ಬಗ್ಗೆ ನಾನು ಹೆಚ್ಚೇನೂ ಮಾತನಾಡಲ್ಲ ಎಂದರು.
ದೇವಸ್ಥಾನಕ್ಕೆ ಹೋಗೋದು ನಮ್ಮ ಸಂಪ್ರದಾಯ. ಮೂಕಾಂಬಿಕಾ ತಾಯಿಗೆ ನಮಸ್ಕಾರ ಹಾಕಿ ಬಂದಿದ್ದೇನೆ. ಯಾಕೆ? ಏನು? ಅಂತ ನೀವು ಕೇಳ್ಬಾರ್ದು ನಾನು ಹೇಳ್ಬಾರ್ದು ಎಂದು ಉತ್ತರಿಸಿದರು.