ಉಡುಪಿ| ಕ್ರೈನ್‌ನ ತೊಟ್ಟಿಲಿನಿಂದ ಬಿದ್ದು ಓರ್ವ ಮೃತ್ಯು: ಮಹಿಳೆ ಗಂಭೀರ
ಉಡುಪಿ, ಜೂ.14: ಮನೆಯ ಸ್ಲಾಬ್ ಸೋರಿಕೆ ಸ್ಥಳವನ್ನು ಪರೀಕ್ಷಿಸುತ್ತಿದ್ದ ವೇಳೆ ಕ್ರೈನ್‌ನ ತೊಟ್ಟಿನಿಂದ ಬಿದ್ದು ಓರ್ವ ಮೃತಪಟ್ಟು, ಮಹಿಳೆ ಗಾಯಗೊಂಡ ಘಟನೆ ಉಡುಪಿ ನಗರದ ಕೋರ್ಟ್ ಹಿಂಭಾಗದ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.
ಮೃತರನ್ನು ಸಂತೆಕಟ್ಟೆ ಅಬ್ಬಣ್ಣ ಕುದ್ರು ನಿವಾಸಿ ಫ್ರಾನ್ಸಿಸ್ ಫುರ್ಟಾಡೋ(60) ಎಂದು ಗುರುತಿಸಲಾಗಿದೆ. ಗಾಯಗೊಂಡ ಕುಂದಾಪುರ ತಲ್ಲೂರು ಗ್ರಾಮದ ಶಾರದಾ (35) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕಿತ್ತೂರು ಚೆನ್ನಮ್ಮ ರಸ್ತೆಯ ವಿನ್ಸೆಂಟ್ ಫುರ್ಟಾಡೊ ಎಂಬವರ ಮನೆಯ ಮಾಡಿನಲ್ಲಿದ್ದ ಲಿಕೇಜ್‌ನ್ನು ನೋಡಿ ಸರಿಪಡಿಸಲು ಬೆಳಗ್ಗೆ ಅವರ ತಮ್ಮ ಫ್ರಾನ್ಸಿಸ್ ಬಂದಿದ್ದು, ಬಳಿಕ ಮಾಡಿನ ಮೇಲೆ ಹತ್ತಿ ಲೀಕೇಜ್‌ನ್ನು ನೋಡಲು ಕ್ರೈನ್ ತರಿಸಿದ್ದರು. ಫ್ರಾನ್ಸಿಸ್ ಹಾಗೂ ಶಾರದ ಕ್ರೈನ್ ತೊಟ್ಟಿಲಿನ ಒಳಗೆ ಹತ್ತಿ ಮೇಲೆ ಹೋಗಿ ಲಿಕೇಜ್‌ನ ವಿಡಿಯೋ ಮಾಡಿ ಕೆಳಗೆ ಬರುತ್ತಿರುವಾಗ ಕ್ರೈನ್, ಚಾಲಕನ ಹತೋಟಿ ತಪ್ಪಿತ್ತೆನ್ನಲಾಗಿದೆ.
ಇದರಿಂದ ಕ್ರೈನ್ ತೊಟ್ಟಿಲು ಜೋರಾಗಿ ಅಲುಗಾಡಿದ್ದು, ತೊಟ್ಟಿಲಿನ ಒಂದು ಭಾಗದ ಕೊಂಡಿ ಕಳಚಿದ ಪರಿಣಾಮ ಫ್ರಾನ್ಸಿಸ್ ಹಾಗೂ ಶಾರದಾ ಕೆಳಗೆ ಬಿದ್ದರು ಎಂದು ತಿಳಿದುಬಂದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಫ್ರಾನ್ಸಿಸ್ ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟರು. ಈ ಘಟನೆಗೆ ಕ್ರೈನ್ ಚಾಲಕನು ಮುಂಜಾಗ್ರತಾ ಕ್ರಮವಾಗಿ ಯಾವುದೇ ಬೆಲ್ಟ್‌ಗಳನ್ನು ನೀಡದೇ ನಿರ್ಲಕ್ಷತನ ವಹಿಸಿರುವುದೇ ಕಾರಣ ಎಂದು ದೂರಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.