ಮಳೆಗೆ ಬೈಂದೂರು ತಾಲೂಕು ಜಲಾವೃತ: ಜನಜೀವನ ಅಸ್ತವ್ಯಸ್ತ
ಬೈಂದೂರು, ಜೂ.16: ರವಿವಾರ ರಾತ್ರಿಯಿಡೀ ಸುರಿದ ಭಾರೀ ಗಾಳಿ-ಮಳೆಗೆ ಬೈಂದೂರು ತಾಲೂಕಿನ ಸೌಪರ್ಣಿಕಾ, ಎಡಮಾವಿನಹೊಳೆ, ಸುಮನಾವತಿ ನದಿ ಉಕ್ಕಿ ಹರಿದ ಕಾರಣ ಸೋಮವಾರ ನಸುಕಿನ ಜಾವ ನದಿ ತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು ಬೈಂದೂರಿನ ಹಲವು ಗ್ರಾಮಗಳು ಜಲದಿಗ್ಬಂಧನಕ್ಕೊಳಗಾಗಿ ಅವಾಂತರ ಸೃಷ್ಟಿಯಾಗಿದೆ.
ನೆರೆ ಬಾಧಿತ ಸ್ಥಳಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತಿತರರು ಭೇಟಿ ನೀಡಿದರು.
ಹಳಗೇರಿ 25 ವರ್ಷದ ಬಳಿಕ ಜಲಾವೃತ: ಕಂಬದಕೋಣೆ ಗ್ರಾಪಂ ವ್ಯಾಪ್ತಿಯ ಎಡಮಾವಿನಹೊಳೆ ತುಂಬಿ ಹರಿದ ಪರಿಣಾಮ ಹಳಗೇರಿ, ಕಂಬಳಗದ್ದೆ ಪರಿಸರವಿಡೀ ಜಲಾವೃತಗೊಂಡಿದೆ. ಈ ಭಾಗದಲ್ಲಿ ಕಳೆದ 25 ವರ್ಷಗಳ ಬಳಿಕ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೆರೆ ನೀರು ನುಗ್ಗಿದೆ ಎಂದು ಊರಿನ ಹಿರಿಯ ನಾಗರಿಕರೊಬ್ಬರು ’ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿನ ಮುಖ್ಯ ರಸ್ತೆಯಿಂದ ಹಳಗೇರಿ ಕಂಬಳಗದ್ದೆ ಸಂಪರ್ಕ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ನೆರೆಪೀಡಿತ ಪ್ರದೇಶದ 7-8 ಮನೆಯ ನಿವಾಸಿಗಳನ್ನು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿ ರುವುದರಿಂದ ಸ್ಥಳೀಯರು ದೋಣಿಯ ಮೂಲಕ ವಿದ್ಯಾರ್ಥಿಗಳನ್ನು ಕರೆತಂದರು.
ಬೈಂದೂರು ವಿಧಾನಸಭಾ ವ್ಯಾಪ್ತಿಯ ಹಲವು ಭಾಗಗಳಲ್ಲಿ ಏಕಾಏಕಿ ನೆರೆ ನೀರು ನುಗ್ಗಿದ ಹಿನ್ನೆಲೆ ತಕ್ಷಣದ ಕಾರ್ಯಾಚರಣೆಗೆ ತೊಡಕಾಗಿತ್ತು. ಹಳಗೇರಿಯಲ್ಲಿ ಸ್ಪೀಡ್ ಬೋಟ್‌ನ ಎಂಜಿನ್ ಕೆಟ್ಟು ನಿಂತು ಅತಂತ್ರ ಸ್ಥಿತಿಯಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸ್ಥಳೀಯ ಮೀನುಗಾರರು ನೆರವಾಗಿ ಮಾನವೀಯತೆ ಮೆರೆದರು. ಹಳಗೇರಿ ಕಂಬಳಗದ್ದೆಯಲ್ಲಿ ನೆರೆ ನೀರಿಗೆ ಸಿಲುಕಿಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ವಿಶೇಷ ಚೇತನ ವ್ಯಕ್ತಿಯ ಕುಟುಂಬವೂ ಸೇರಿದಂತೆ ಮೂರು ಕುಟುಂಬಗಳನ್ನು ಕೆಟ್ಟು ಹೋದ ಬೋಟ್‌ನಲ್ಲೇ ಹರಸಾಹಸಪಟ್ಟು ನೀರಿನಲ್ಲಿ ಎಳೆದುಕೊಂಡೇ ಬಂದು ಮರಳಿ ಸುರಕ್ಷಿತ ಪ್ರದೇಶಕ್ಕೆ ಮೀನುಗಾರರು ಕರೆತಂದರು.
ಇಲ್ಲಿನ ಕೆಲ ಕುಟುಂಬಗಳು ಮನೆಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಬರಲು ಒಪ್ಪದ ಕಾರಣ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ನೇರವಾಗಿ ದೋಣಿಯ ಮೂಲಕ ಸಾಗಿ ಕುಟುಂಬಸ್ಥರ ಮನವೊಲಿಸಿ ಕೆಲವರನ್ನು ಸುರಕ್ಷಿತ ಸ್ಥಳಕ್ಕೆ ತರೆತಂದರು. ಯಡ್ತರೆ, ಕುದ್ರುಹಿತ್ಲು, ರಾವುತನ ಕಟ್ಟೆ, ಯಡ್ತರೆ ಗರ್ಜಿನಹಿತ್ಲು ಮೊದಲಾದ ನೆರೆಪೀಡಿತ ಪ್ರದೇಶಗಳಿಗೆ ತೆರಳಿದ ಶಾಸಕ ಗಂಟಿಹೊಳಿ ಸುರಕ್ಷಿತ ಸ್ಥಳಕ್ಕೆ ಬರುವಂತೆ ಅಲ್ಲಿನ ನಿವಾಸಿಗಳ ಮನವೊಲಿಸಲು ಪ್ರಯತ್ನಿಸಿದರು.
ಇನ್ನು ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾಕೆರೆ, ಪಡುಕೋಣೆ, ಹಡವು, ಚಿಕ್ಕಳ್ಳಿ ಮತ್ತು ಮರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರು ಕುದ್ರು, ವರಹಾ ಮಹಾರಾಜ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಮುಳುಗಡೆಯಾಗಿದ್ದು, ನೂರಾರು ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಮರವಂತೆಯಿಂದ ಪಡುಕೊಣೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹಾಗೂ ನಾವುಂದದಿಂದ ಬಡಾಕೆರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದ್ದು, ಈ ಪರಿಸರದ ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ಬಿಜೂರಲ್ಲಿ ಅವಾಂತರ: ಬಿಜೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಗರಡಿ ರಸ್ತೆ, ಕಳಿನ್ ಸಾಲು ಕೇರಿ, ಅರೆಕಲ್ಲು ಹೊಳೆತೋಟ, ಶಾಲೆಮಕ್ಕಿ, ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಗ್ಗರ್ಸೆ, ಎಳಜಿತ್ ಗ್ರಾಮದ ಸಾತೇರಿ ಮೊದಲಾಡೆದೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಈ ಭಾಗದಲ್ಲಿ ಎನ್‌ಡಿಆರ್‌ಎಫ್ ತಂಡ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತು.
ಮಹಿಳೆಯರ ಆಕ್ರೋಶ: ಶಾಸಕ ಗುರುರಾಜ ಗಂಟಿಹೊಳೆ ಕಂಬದಕೋಣೆ ಹಳಗೇರಿಯಲ್ಲಿ ಕಾರ್ಯಾ ಚರಣೆ ವೀಕ್ಷಿಸಲು ಬಂದ ವೇಳೆ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಸಂಪರ್ಕ ರಸ್ತೆ ಎತ್ತರ ಮಾಡಿ ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟರೂ ಸ್ಪಂದನೆ ಸಿಕ್ಕಿಲ್ಲ. ಮತ ಕೇಳಲು ಬರುತ್ತಾರೆ. ನೆರೆ ಸಂದರ್ಭ ಬಂದುಹೋಗುತ್ತಾರೆ. ಆದರೆ ನಮ್ಮ ಕಷ್ಟ ಆಲಿಸಲು, ಪರಿಹಾರ ನೀಡಲು ಜನಪ್ರತಿನಿಧಿಗಳು ಬೇರೆ ಸಮಯದಲ್ಲಿ ಇತ್ತಕಡೆ ಬರೋದಿಲ್ಲ ಎಂದು ದೂರಿದರು.
ನಾವುಂದ, ಸಾಲ್ಬುಡ, ಬಡಾಕೆರೆ ಸಂಪೂರ್ಣ ಜಲಾವೃತ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾ ಯಿತಿಯ ಸಾಲ್ಬುಡ, ಭಾಂಗೀನ್ ಮನೆ, ಕುದ್ರು, ಕೆಳಾಬದಿ ಸಂಪೂರ್ಣ ಜಲಾವೃತಗೊಂಡಿದೆ. ನಾವುಂದದಿಂದ ಅರೆಹೊಳೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಾಲ್ಬುಡದಲ್ಲಿ ಸಂಪೂರ್ಣ ಜಲಾವೃತ ಗೊಂಡು ಸಂಪರ್ಕ ಕಡಿತಗೊಂಡಿದೆ.
ಈ ಪರಿಸರದಲ್ಲಿ ಪ್ರತೀ ವರ್ಷವೂ ನೆರೆ ನೀರು ನುಗ್ಗುತ್ತಿದ್ದು, ಪಂಚಾಯಿತಿ ಹಾಗೂ ಸ್ಥಳೀಯರು ದೋಣಿ ಗಳ ಮೂಲಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ. ವರ್ಷಪ್ರತಿಯಂತೆ ಇಲ್ಲಿನ ಸ್ಥಳೀಯ ಯುವಕರೇ ಸ್ವಯಂಸೇವಕರಾಗಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಜನ, ಜಾನುವಾರು ಸ್ಥಳಾಂತರಿಸಲು ಸಹಕರಿಸುತ್ತಿದ್ದಾರೆ.
ದಿನಸಿ, ಅಡುಗೆ ಸಾಮಾಗ್ರಿ, ಮೆಡಿಸಿನ್ ತರಲು ಕೂಡ ಇಲ್ಲಿ ದೋಣಿ ಪ್ರಯಾಣ ಅವಶ್ಯಕವಾಗಿದೆ. ಎಕರೆಗಟ್ಟಲೆ ಭತ್ತದ ಕೃಷಿ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಮಳೆಗಾಲದಲ್ಲಿನ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ಜಲದಿಗ್ಭಂಧನವಾಗಲಿದೆ. ನೆರೆ ಇಳಿದು ಸಹಜ ಸ್ಥಿತಿಯತ್ತ ಬರಲು ಹೆಚ್ಚುಕಮ್ಮಿ ಮೂರ್ನಾಲ್ಕು ದಿನವಾದರೂ ಬೇಕು.
ಯುವಕರ ಹುಚ್ಚಾಟ
ಬೈಂದೂರು ತಾಲೂಕಿನ ನಾವುಂದ-ಬಡಾಕೆರೆ ಪ್ರಮುಖ ರಸ್ತೆಯ 100-150 ಮೀಟರ್ ವ್ಯಾಪ್ತಿಯಲ್ಲಿ ನೆರೆ ನೀರು ಪ್ರವಾಹದಂತೆ ಹರಿಯುತ್ತಿದ್ದು ನಡೆದು ಸಾಗಲೂ ಅಸಾಧ್ಯವಾಗಿತ್ತು. ಆದರೆ ಅದೇ ನೀರಿನ ಮದ್ಯೆ ಒಂದಷ್ಟು ಮಂದಿ ಯುವಕರು ದ್ವಿಚಕ್ರ ವಾಹನ ಚಲಾಯಿಸಿ ಹುಚ್ಚಾಟ ನಡೆಸಿರುವುದು ವರದಿಯಾಗಿದೆ. ಈ ಪೈಕಿ ಒಂದೆ ಬೈಕಿನಲ್ಲಿ ತೆರಳುತ್ತಿದ್ದ ಯುವಕರಿಬ್ಬರು ನೀರಿನ ಸೆಳೆತಕ್ಕೆ ಸಿಕ್ಕು ಬೈಕ್ ಸಮೇತ ನೀರಿಗೆ ಬಿದ್ದು ಕೆಲವು ದೂರ ಕೊಚ್ಚಿಹೋಗಿದ್ದು ಈಜು ಬಂದಿದ್ದರಿಂದ ಸಮೀಪದ ಮನೆಯ ಕಾಂಪೌಂಡ್ ಗೋಡೆ ಹಿಡಿದು ಬಚಾವ್ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಪ್ರಮುಖ ರಸ್ತೆಯ ನಡುವೆ ನೀರಿನ ರಭಸ ಜಾಸ್ತಿಯಿರುವಾಗ ಸಂಪರ್ಕ ರಸ್ತೆಯನ್ನು ಸಂಬಂಧಿತ ಇಲಾಖೆ ಮುಚ್ಚಿದಲ್ಲಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
‘ಬೈಂದೂರಿನ ಬಿಜೂರು ಸಹಿತ ವಿವಿದೆಡೆ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಅಗ್ನಿಶಾಮಕ ದಳದ ತಂಡ ಬೇರೆ ಕಡೆ ಕಾರ್ಯಾಚರಣೆಯಲ್ಲಿ ಭಾಗಿ ಯಾಗಿದೆ. ಕೆಲವುಕಡೆ ಜನ-ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ತಾತ್ಕಾಲಿಕವಾಗಿ ಮನೆ ತೊರೆದ ಜನರಿಗೆ ಕಾಳಜಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲು ಅಗತ್ಯ ಕ್ರಮವಹಿಸಲಾಗಿದೆ. ಎರಡು ತಾಲೂಕಿನ ಸಂಬಂದಪಟ್ಟ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
-ರಶ್ಮಿ ಎಸ್.ಆರ್, ಕುಂದಾಪುರ ಉಪವಿಭಾಗಾಧಿಕಾರಿ.
"ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇಂತಹ ಅಪಾಯದ ಸಂದರ್ಭದಲ್ಲಿ ಕರಾವಳಿ ಮೀನುಗಾರರು ದೋಣಿಗಳನ್ನು ಕೊಟ್ಟು, ಸ್ವತಃ ಅವರೇ ಕಾರ್ಯಾಚರಣೆಗಿಳಿದಿದ್ದಾರೆ. ಜಿಲ್ಲಾಡಳಿತ ನಮ್ಮ ಜೊತೆಗಿದೆ. ಜನ-ಜಾನುವಾರು ಸ್ಥಳಾಂತರ, ಕಾಳಜಿ ಕೇಂದ್ರ ಸಹಿತ ಅಗತ್ಯಕ್ರಮ ವಹಿಸಲಾಗಿದೆ".
-ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕರು.
‘ಪ್ರತಿವರ್ಷ ಇದೇ ಸಮಸ್ಯೆಯಾಗಿದೆ. ಎರಡು ದಿನಗಳ ಹಿಂದೆ ಬಿತ್ತನೆ ಮಾಡಿರುವ ಭತ್ತ ನೀರಿನಲ್ಲಿ ಕೊಚ್ಚಿ ಹೋಗಿದೆ. ಮರು ಬಿತ್ತನೆಗೆ ಭತ್ತದ ಸಮಸ್ಯೆ ಎದುರಾಗುತ್ತಿದ್ದು, ಕೃಷಿ ಇಲಾಖೆ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ನೀಡಬೇಕು. ನೆರೆಪೀಡಿತ ಪ್ರದೇಶವೆಂದೇ ಬಿಂಬಿತವಾಗಿರುವ ಸಾಲ್ಬುಡದಲ್ಲಿ ದನ-ಕರುಗಳನ್ನು ಸುರಕ್ಷಿತವಾಗಿ ಕಟ್ಟಿ ಹಾಕಲು ಶೆಡ್ ವ್ಯವಸ್ಥೆ ನಿರ್ಮಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ.
-ನಾಗರಾಜ್, ಸಾಲ್ಬುಡ ನಿವಾಸಿ.
ಜಿಲ್ಲೆಯಲ್ಲಿ ನೆರೆಗೆ ಮೊದಲ ಬಲಿ
ಭಾರೀ ಮಳೆಯಿಂದಾಗಿ ಉಡುಪಿ ತಾಲೂಕು ಉದ್ಯಾವರ ಗ್ರಾಮದ ಕೇದಾರದ ನಿವಾಸಿ ರೊನಾಲ್ಡ್ ಫೆರ್ನಾಂಡೀಸ್ (52) ಎಂಬವರು ರವಿವಾರ ಸಂಜೆ ಮನೆ ಸಮೀಪದ ತೋಡಿಗೆ ಅಕಸ್ಮಿಕವಾಗಿ ಬಿದ್ದು, ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ.
ರವಿವಾರ ಸಂಜೆ ಮನೆಗೆ ಮರಳುತಿದ್ದ ಅವರು ಮನೆ ಹಿಂಭಾಗದ ತೋಡಿಗೆ ಅಕಸ್ಮಿಕವಾಗಿ ಬಿದ್ದಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಹಶೀಲ್ದಾರ್ ಕಚೇರಿಯ ಪ್ರಾಥಮಿಕ ವರದಿ ತಿಳಿಸಿದೆ.