×
Ad

ಉಡುಪಿ| ಮಳೆಯ ಕಣ್ಣುಮುಚ್ಚಾಲೆಯಾಟ; ಹೆಚ್ಚುತ್ತಿರುವ ನಷ್ಟದ ಪ್ರಮಾಣ

Update: 2025-06-17 20:22 IST

ಉಡುಪಿ, ಜೂ.17: ಮಳೆಯ ಕಣ್ಣುಮುಚ್ಚಾಲೆಯಾಟದ ನಡುವೆ, ಜಿಲ್ಲೆಯ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದ್ದು, ಆದರೆ ಗಾಳಿ- ಮಳೆಯಿಂದ ಜಿಲ್ಲೆಯಾದ್ಯಂತ ಆಗುತ್ತಿರುವ ಹಾನಿಯ ಪ್ರಮಾಣದಲ್ಲಿ ಹೆಚ್ಚಳ ವಾಗಿದೆ. ಮನೆ, ತೋಟಗಾರಿಕಾ ಬೆಳೆ ಹಾಗೂ ನೆರೆಯಿಂದ ಗೃಹೋಪಯೋಗಿ ವಸ್ತುಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಮಾಹಿತಿ ಸಿಕ್ಕಿದೆ.

ಹವಾಮಾನ ಇಲಾಖೆ ಇಂದಿಗೆ ರೆಡ್ ಅಲರ್ಟ್ ಘೋಷಿಸಿದ್ದರೂ, ನಿನ್ನೆ ಯಂತೆ ಮಳೆ ನಿರಂತರವಾಗಿ ಸುರಿಯದೇ ಆಗಾಗ ಬಿಡುವು ನೀಡುತ್ತಿತ್ತು. ಇದರಿಂದ ಬೈಂದೂರು, ಕುಂದಾಪುರ, ಹೆಬ್ರಿಗಳಲ್ಲಿ ಕಂಡು ಬಂದ ನೆರೆ ಸಂಪೂರ್ಣ ಇಳಿದುಹೋಗಿತ್ತು. ಕೇವಲ ನಾವುಂದ, ಸಾಲ್ಬುಡಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೆರೆ ಇದ್ದು, ಜನಜೀವನ ಸಾಮಾನ್ಯಸ್ಥಿತಿಗೆ ಮರಳಿತ್ತು.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಕೋಪ ನಿಯಂತ್ರಣ ಕೇಂದ್ರಕ್ಕೆ ಇಂದು ಬಂದಿರುವ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 25ರಷ್ಟು ಮನೆ ಹಾನಿ ಪ್ರಕರಣ ಗಳು ವರದಿಯಾಗಿದ್ದು 12 ಲಕ್ಷದಷ್ಟು ನಷ್ಠ ಸಂಭವಿಸಿದೆ. ಬೆಳೆ ಹಾನಿಯ ಆರು ಪ್ರಕರಣಗಳಲ್ಲಿ ಒಂದೂ ಕಾಲು ಲಕ್ಷಕ್ಕೂ ಅಧಿಕ ಹಾನಿಯಾಗಿದ್ದರೆ, ಮನೆಗಳಿಗೆ ನೀರು ನುಗ್ಗಿದ ಆರು ಪ್ರಕರಣಗಳಲ್ಲಿ ಒಂದು ಲಕ್ಷ ರೂ.ಗಳಿಗೂ ಅಧಿಕ ಗೃಹೋಪಯೋಗಿ ವಸ್ತುಗಳಿಗೆ ಹಾನಿಯುಂಟಾದ ಮಾಹಿತಿ ದೊರಕಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 35 ಪ್ರಕರಣಗಳಲ್ಲಿ 15 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.

ಬುಧವಾರಕ್ಕೆ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಿಗೆ ಬುಧವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಗುರುವಾರದಿಂದ ಎಲ್ಲೋ ಎಲರ್ಟ್ ಇದ್ದು, ಸಾಮಾನ್ಯ ಸ್ಥಿತಿ ಇರಲಿದೆ. ಇಂದು ರೆಡ್ ಅಲರ್ಟ್ ಪಡೆದಿದ್ದ ಕೊಡಗು ಸೇರಿದಂತೆ ಚಿಕ್ಕಮಗಳೂರು, ಶಿವಮೊಗ್ಗ ನಾಳೆ (ಬುಧವಾರ) ಎಲ್ಲೋ ಎಲರ್ಟ್ ಇರಲಿದ್ದು, ಉಳಿದೆಡೆ ಸಾಮಾನ್ಯ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳವನ್ನು ಒಳಗೊಂಡ ಬಂಗಾಳಕೊಲ್ಲಿ ಯಲ್ಲಿ ಹಾಗೂ ಅರಬಿಸಮುದ್ರದ ಗುಜರಾತ್ ಆಸುಪಾಸಿನ ಸಮುದ್ರದಲ್ಲಿ ವಾಯುಭಾರ ಕುಸಿತ ಕಂಡುಬಂದಿದೆ ಎಂದು ವರದಿ ತಿಳಿಸಿದ್ದು, ಇದರಿಂದ ಕೇರಳ, ಕರ್ನಾಟಕ ತೀರಗಳಲ್ಲಿ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಮನೆಗಳಿಗೆ ಭಾರೀ ಹಾನಿ: ನಿನ್ನೆಯ ಗಾಳಿ-ಮಳೆಯಿಂದ ಕೆಲವು ಮನೆಗಳಿಗೆ ಭಾರೀ ಪ್ರಮಾಣದ ಹಾನಿ ಕಂಡುಬಂದಿದೆ. ಉಡುಪಿ ತಾಲೂಕು ಮರ್ಣೆಯ ಸುರೇಶ್ ನಾಯಕ್ ಎಂಬವರ ಮನೆ ಮೇಲೆ ಮರ ಬಿದ್ದು ಮೂರು ಲಕ್ಷ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ.

ಅದೇ ರೀತಿ ಬೈಂದೂರು ತಾಲೂಕು ಶಿರೂರಿನ ನಾಗಪ್ಪ ಎಂಬವರ ಮನೆಗೆ ಎರಡು ಲಕ್ಷ ರೂ., ಕಂಬದ ಕೋಣೆಯ ಸೋಮ ಪೂಜಾರಿ ಮನೆಗೆ ಒಂದೂವರೆ ಲಕ್ಷ ರೂ., ಕಾಪು ತಾಲೂಕು ಪಲಿಮಾರಿನ ಭಾಸ್ಕರ ಆಚಾರಿ, ಕೋಣಿಯ ಶಾಂತಾ, ಬೆಳ್ಳಾಲದ ಆನಂದ ಎಂಬವರ ಮನೆಗೆ ತಲಾ 60ಸಾವಿರ ರೂ.ಗಳ ನಷ್ಟ ಸಂಭವಿಸಿದೆ.

ಕುಂದಾಪುರ ತಾಲೂಕಿನ 9, ಉಡುಪಿ ತಾಲೂಕಿನ ನಾಲ್ಕು, ಕಾರ್ಕಳ ಹಾಗೂ ಬೈಂದೂರು ತಾಲೂಕಿನ ತಲಾ ಮೂರು, ಕಾಪು ತಾಲೂಕಿನ ಐದು ಮನೆಗಳಿಗೆ ವಿವಿಧ ಪ್ರಮಾಣದಲ್ಲಿ ಹಾನಿಯಾದ ವರದಿಗಳು ಬಂದಿವೆ. ನೆರೆಯಿಂದ ಮನೆಯ ವಸ್ತುಗಳಿಗಾದ ಹಾನಿಯ ಆರೂ ಪ್ರಕರಣಗಳು ಕುಂದಾಪುರ ತಾಲೂಕಿನ ವಿವಿದೆಡೆಗಳಿಂದ ವರದಿಯಾಗಿದ್ದರೆ, ಬೆಳೆ ಹಾನಿಯ ಪ್ರಕರಣಗಳು ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಕಂಡು ಬಂದಿವೆ.

ತಡರಾತ್ರಿ 6 ಮನೆಗಳಿಂದ ಜನರ ಸ್ಥಳಾಂತರ

ಸತತ ಮಳೆಯಿಂದ ಸೋಮವಾರ ತಡರಾತ್ರಿ ಕುಂದಾಪುರ ತಾಲೂಕು ಸೇನಾಪುರದ ಆರು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಮುಂಜಾಗ್ರತಾ ಕ್ರಮವಾಗಿ ಮನೆ ಮಂದಿಯನ್ನು ಸ್ಥಳಾಂತರಿಸಲಾಯಿತು. ಎಲ್ಲರೂ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದು, ಯಾರೂ ಸಹ ಗಂಜಿ ಕೇಂದ್ರಗಳಿಗೆ ತೆರಳಿಲ್ಲ ಎಂದು ಮಾಹಿತಿ ಸಿಕ್ಕಿದೆ.







 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News