×
Ad

ತಗ್ಗಿದ್ದ ಮಳೆ: ಬೈಂದೂರಿನ ಹಲವು ಗ್ರಾಮಗಳು ಸಹಜ ಸ್ಥಿತಿಯತ್ತ

Update: 2025-06-17 20:26 IST

ಬೈಂದೂರು, ಜೂ.17: ಕಳೆದ 3-4 ದಿನಗಳಿಂದ ಬೈಂದೂರು ಭಾಗದಲ್ಲಿ ಹಾಗೂ ಕೊಲ್ಲೂರು ಘಾಟಿ ಪ್ರದೇಶಗಳಲ್ಲಿ ಎಡೆಬಿಡದೇ ಸುರಿದ ಮಳೆಯಿಂದಾಗಿ ಸೌಪರ್ಣಿಕಾ ನದಿ ಪಾತ್ರದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ, ಮರವಂತೆ ಭಾಗದಲ್ಲಿ ನೆರೆ ನೀರು ಮನೆಗಳಿಗೆ ನುಗ್ಗಿ ಅಸ್ತವ್ಯಸ್ತ ಗೊಂಡಿದ್ದ ಜನಜೀವನ ಮತ್ತೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.

ಮಂಗಳವಾರ ಮುಂಜಾನೆಯಿಂದ ಮಳೆ ಪ್ರಮಾಣ ತಗ್ಗಿದ್ದರಿಂದ ನಾವುಂದ-ಸಾಲ್ಬುಡದಲ್ಲಿ ಬಹುತೇಕ ನೆರೆ ಇಳಿಕೆಯಾಗಿದೆ. ಇನ್ನೊಂದೆಡೆಯಲ್ಲಿ ಕಡಲ ಕೊರೆತದ ಮುನ್ಸೂಚನೆ ಸಿಕ್ಕಿದೆ. ಕರಾವಳಿ ಭಾಗದಲ್ಲಿ ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ಮತ್ತು ತ್ರಾಸಿ -ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ರುವ ಕಾರಣ ಸಮುದ್ರದ ನೀರಿಗೆ ಇಳಿಯದಂತೆ ಸೂಚನಾ ಫಲಕವನ್ನು ಗಂಗೊಳ್ಳಿ ಪೊಲೀಸರು ಅಳವಡಿಸಿದ್ದರೂ ಕೂಡ ಪ್ರವಾಸಿಗರು ಮತ್ತೆ ಫೋಟೋ, ಸೆಲ್ಪಿಗಾಗಿ ನೀರಿನತ್ತ ಸಾಗುವ ದೃಶ್ಯ ಕಂಡುಬರುತ್ತಿದೆ.

ನೆರೆಯ ಆರ್ಭಟದಿಂದ ನಾವುಂದ ಮತ್ತು ನಾಡ ಕುದ್ರುವಿನಲ್ಲಿಯೂ ನೆರೆ ಆವರಿಸಿದ್ದು, ಇಲ್ಲಿನ ಹಲವಾರು ಮನೆಯವರು ಆತಂಕದಲ್ಲೇ ದಿನಕಳೆಯುವಂತಾಗಿದೆ. ಕುದ್ರುವಿನ ಸುತ್ತಲೂ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದೆ. ವರ್ಷವಿಡೀ ದೋಣಿಯನ್ನೇ ಆಶ್ರಯಿಸಿರುವ ಇಲ್ಲಿನ ನಿವಾಸಿಗಳು ಈ ಬಾರಿ ಭಾರೀ ಪ್ರಮಾಣದ ನೆರೆಯಿಂದಾಗಿ ದೋಣಿಯಲ್ಲೂ ಸಂಚರಿಸಲು ಅಸಾಧ್ಯವಾಗಿದೆ.

ಪ್ರತಿವರ್ಷ ನೆರೆ ಬಂದಾಗ ಮಣ್ಣು ಕೊಚ್ಚಿ ಹೋಗುತ್ತಿದ್ದು, ನದಿ ದಡದಲ್ಲಿ ತಡೆಗೋಡೆಯೂ ಇಲ್ಲದೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ನದಿ ಕೊರೆತವೂ ಜಾಸ್ತಿಯಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸು ತಿದ್ದಾರೆ.

ಕುಡಿಯುವ ನೀರಿಗೆ ಸಮಸ್ಯೆ: ತಗ್ಗು ಪ್ರದೇಶವಾಗಿದ್ದು, ನೆರೆ ಸಮಸ್ಯೆ ಹೆಚ್ಚಾಗಿ ಇರುವ ಕಡೆಗಳಲ್ಲಿ ಬಾವಿಗೆ ಮಳೆ ನೀರು ನುಗ್ಗಿದ ಕಾರಣ ಜನರು ಈಗ ಕುಡಿಯುವ ನೀರಿಗೆ ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ ವಿಷ ಜಂತುಗಳು, ಸೊಳ್ಳೆ ಕಾಟದಿಂದ ಸ್ಥಳೀಯರು ಭೀತಿಗೊಂಡಿದ್ದಾರೆ.

ನೆರೆ ಬಾಧಿತ ಮತ್ತು ಕಡಲ ಕೊರೆತ ಪ್ರದೇಶವನ್ನು ಡ್ರೋನ್ ಮೂಲಕ ಸ್ಥಳೀಯ ಛಾಯಾಗ್ರಾಹಕರ ತಂಡವೊಂದು ಸೆರೆ ಹಿಡಿದಿದ್ದು ನೆರೆ ಪೀಡಿತ ಪ್ರದೇಶದ ದೃಶ್ಯ ಸೆರೆಯಾಗಿದೆ. ಪ್ರಸ್ತುತ ನೆರೆ ಇಳಿಮುಖ ಗೊಂಡಂತೆ ಗೋಚರಿಸಿದರೂ ಕೂಡ ಮಲೆನಾಡು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶ ಗಳಲ್ಲಿ ಮಳೆಯಾದಲ್ಲಿ ಮತ್ತೆ ನೆರೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News