×
Ad

ಜನಸಾಮಾನ್ಯರಿಗೆ ರಕ್ತದಾನದ ಮಹತ್ವದ ಅರಿವು ಮೂಡಿಸಿ: ಡಿಎಚ್‌ಓ ಡಾ.ಬಸವರಾಜ್

Update: 2025-06-17 21:23 IST

ಉಡುಪಿ, ಜೂ.17: ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಪ್ರತಿದಿನ ಸೂಕ್ತ ಗುಂಪಿನ ರಕ್ತದ ಕೊರತೆ ಹಾಗೂ ಅಪಘಾತದಲ್ಲಿ ತೀವ್ರತರಹದ ಗಾಯದಿಂದ ರಕ್ತಸ್ರಾವವಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನಸಾಮಾನ್ಯರಿಗೆ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ್ ಜಿ.ಹುಬ್ಬಳ್ಳಿ ಹೇಳಿದ್ದಾರೆ.

ಉದ್ಯಾವರ ಕುತ್ಪಾಡಿಯಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ, ಯೂತ್ ರೆಡ್‌ಕ್ರಾಸ್, ರೋಟರ್ಯಾಕ್ಟ್ ಕ್ಲಬ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಜೆಸಿಐ ಅಲೂಮಿನಿ ಕ್ಲಬ್ ವಲಯ 15ರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ವಿಶ್ವ ರಕ್ತದಾನಿ ಗಳ ದಿನಾಚರಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಪಘಾತ ಹಾಗೂ ಇನ್ನಿತರ ಕಾಯಿಲೆಗಳಿಂದ ಪ್ರಾಣಾಪಾಯದಲ್ಲಿರುವ ರೋಗಿಗಳ ಜೀವ ಉಳಿಸಲು ರಕ್ತದಾನ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ರಕ್ತದಾನ ಮಾಡಲು ಜನರು ಮುಂದೆ ಬರಬೇಕು ಎಂದು ಅವರು ಜಿಲ್ಲೆಯ ಜನತೆಗೆ ಕರೆ ನೀಡಿದರು.

ರಕ್ತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಮಾಹಿತಿಯ ಕೊರತೆ ಇದ್ದು, ರಕ್ತದಾನ ಮಾಡುವು ದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ರಕ್ತದಾನದಂತಹ ಮಹತ್ವಪೂರ್ಣ ವಾದ ಕಾರ್ಯದಲ್ಲಿ ಎಲ್ಲರೂ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.

ರಕ್ತದಾನ ಶ್ರೇಷ್ಠದಾನವಾಗಿದ್ದು, ರಕ್ತಕ್ಕೆ ಯಾವುದೂ ಪರ್ಯಾಯವಿಲ್ಲ. ಅದನ್ನು ಕೃತಕವಾಗಿ ತಯಾರಿ ಸಲೂ ಸಾಧ್ಯವಿಲ್ಲ. ವ್ಯಕ್ತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಒಂದು ಬಾರಿಯಾದರೂ ರಕ್ತದಾನ ಮಾಡಿದಲ್ಲಿ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುವುದರೊಂದಿಗೆ ಹೃದಯಾಘಾತ, ಕ್ಯಾನ್ಸರ್, ಹೃದಯರೋಗಗಳು ಸೇರಿದಂತೆ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದ ಅವರು, ಯುವ ಜನತೆ ಸ್ವಯಂಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ಜಿಲ್ಲಾ ಸರ್ಜನ್ ಡಾ. ಹೆಚ್ ಅಶೋಕ್ ಮಾತನಾಡಿ, ಉಡುಪಿ ಜಿಲ್ಲೆ ರಕ್ತದಾನಿಗಳ ಜಿಲ್ಲೆ ಎಂದೇ ಗುರುತಿಸಲ್ಪಟ್ಟಿದೆ. ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಜನರು ರಕ್ತದಾನ ಮಾಡಲು ಮುಂದೆ ಬರುತ್ತಾರೆ. ನಮ್ಮ ಜಿಲ್ಲೆಯಿಂದ ಅಕ್ಕಪಕ್ಕದ ಜಿಲ್ಲೆಯವರು ರಕ್ತವನ್ನು ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಜೀವನದಲ್ಲಿ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಕುತ್ಪಾಡಿ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್. ಪ್ರತಿಜ್ಞಾ ವಿಧಿ ಬೋಧಿಸಿದರು.

ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿರುವ ದಾನಿ ಗಳಾದ ಲಕ್ಷ್ಮೀಶ ಉಡುಪ, ರೂಪ ಬಲ್ಲಾಳ್, ಕಾರ್ತಿಕ್ ನಾಯ್ಕ್ ಹಾಗೂ ಗಿರಿಜ ಸುವರ್ಣ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಎಸ್‌ಡಿಎಂ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ, ನಾಗರಾಜ್ ಎಸ್, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾಕುಮಾರಿ, ಜೆಸಿಐ ಅಲೂಮಿನಿ ಕ್ಲಬ್ ಅಧ್ಯಕ್ಷೆ ಆಶಾ ಅಲೆನ್ ವಾಜ್ ಉಪಸ್ಥಿತರಿದ್ದರು.

ಡಾ.ವಿದ್ಯಾಲಕ್ಷ್ಮೀ ಸ್ವಾಗತಿಸಿ, ಜಿಲ್ಲಾ ಕಾರ್ಯಕ್ರಮ ಮೇಲ್ವಿಚಾರಕ ಮಹಾಬಲೇಶ್ವರ ನಿರೂಪಿಸಿದರು. ಯೂತ್ ರೆಡ್‌ಕ್ರಾಸ್‌ನ ಸಹಾಯಕ ಡೀನ್ ಯೋಗೀಶ್ ಆಚಾರ್ಯ ವಂದಿಸಿದರು.




Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News