ಉಡುಪಿ: ವರ್ಗಾವಣೆಗೊಂಡ ಡಿಸಿಗೆ ದಸಂಸ ನಿಯೋಗ ಅಭಿನಂದನೆ
ಉಡುಪಿ ಜೂ.18: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ ನಿಯೋಗ ವರ್ಗಾವಣೆಗೊಂಡ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ಸ್ವರೂಪಾ ಅವರನ್ನು ಸ್ವಾಗತಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಜನಸಾಮಾನ್ಯರ ಧ್ವನಿಯಾಗಿ ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿದು ದಕ್ಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಡಾ.ವಿದ್ಯಾಕುಮಾರಿ, ತಮ್ಮ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಿದ್ದರು. ಸಮಾನತೆ ಸಹೋದರತೆ, ಭಾತೃತ್ವಕ್ಕೆ ಹೆಚ್ಚಿನ ಒತ್ತು ನೀಡಿ ಜಿಲ್ಲೆಯಲ್ಲಿ ಸಾಮಾಜಿಕ ಮತಿಯ ಸಾಮರಸ್ಯವನ್ನು ಕಾಪಾಡುವಲ್ಲಿ ಶ್ರಮಿಸಿದ್ದರು ಎಂದು ನಿಯೋಗ ತಿಳಿಸಿದೆ.
ನಿಯೋಗದಲ್ಲಿ ಜನಪರ ಹೋರಾಟಗಾರ ಜಯನ್ ಮಲ್ಪೆ, ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು, ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಬಾಲಗಂಗಾಧರ ಗೌಡ, ಅಂಬೇಡ್ಕರ್ ಯುವ ಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಶಿವಕುಮಾರ್ ಪರ್ಕಳ, ಹರೀಶ್ ಸಾಲ್ಯಾನ್, ಕಮಲಾಕ್ಷ, ನಾರಾಯಣ ಪರ್ಕಳ, ಭಗವಾನ್ ದಾಸ್, ಮೋಹನ್ ದಾಸ್, ರವಿರಾಜ್ ಉಪಸ್ಥಿತರಿದ್ದರು.