×
Ad

ಉಡುಪಿ| ಪ್ರತ್ಯೇಕ ಪೋಕ್ಸೋ ಪ್ರಕರಣ: ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

Update: 2025-06-18 21:53 IST

ಉಡುಪಿ, ಜೂ.18: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರತ್ಯೇಕ ಎರಡು ಪ್ರಕರಣ ಗಳಲ್ಲಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಫೋಕ್ಸೋ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಹೊನ್ನಾವರದ ಸುಬ್ರಹ್ಮಣ್ಯ ಇರಾ ಗೌಡ(36) ಹಾಗೂ ಬೆಳ್ತಂಗಡಿಯ ಆರೀಫ್ (23) ಶಿಕ್ಷಿಗೆ ಗುರಿಯಾದ ಆರೋಪಿಗಳು.

ಒಂದನೇ ಪ್ರಕರಣ: 16ವರ್ಷ ಪ್ರಾಯದ ಬಾಲಕಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತನ್ನ ಅಜ್ಜನನ್ನು ನೋಡಲು ತನ್ನ ತಾಯಿಯೊಂದಿಗೆ ಬಂದಿದ್ದು, ವಾಪಾಸ್ಸು ಬಸ್ಸಿನಲ್ಲಿ ಹೋಗುವಾಗ ಆರೋಪಿ ಸುಬ್ರಹ್ಮಣ್ಯ ಗೌಡ ಬಾಲಕಿ ಹಾಗೂ ಆಕೆಯ ಚಿಕ್ಕಮ್ಮನಿಗೆ ಲೈಂಗಿಕ ಕಿರುಕುಳ ನೀಡಿದ್ದನು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಪೊಲೀಸ್ ನಿರೀಕ್ಷಕ ಮಹೇಶ್ ಕಂಬ್ಳಿ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಒಟ್ಟು 25 ಸಾಕ್ಷಿಗಳ ಪೈಕಿ 11ಸಾಕ್ಷಿಗಳ ವಿಚಾರಣೆ ಮಾಡ ಲಾಗಿದ್ದು, ಆರೋಪಿತನ ಮೇಲೆ ಆರೋಪ ಸಾಭಿತಾದ ಹಿನ್ನೆಲೆಯಲ್ಲಿ ಆತನಿಗೆ 3ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆದೇಶಿಸಿದರು. ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. 5 ಸಾವಿರ ರೂ.ನಲ್ಲಿ ಒಂದು ಸಾವಿರ ರೂ. ಸರಕಾರಕ್ಕೆ ಮತ್ತು 4ಸಾವಿರ ರೂ. ನೊಂದ ಬಾಲಕಿಗೆ ಹಾಗೂ ನೊಂದ ಬಾಲಕಿಗೆ ಸರಕಾರದಿಂದ 10,000 ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಎರಡನೇ ಪ್ರಕರಣ: 10ವರ್ಷ ಪ್ರಾಯದ ಬಾಲಕಿಗೆ ಮನೆ ಬಳಿಯ ಅಂಗಡಿಗೆ ಹಾಲು ತರಲು ತನ್ನ ತಮ್ಮನೊಂದಿಗೆ ಹೋದಾಗ ಆರೋಪಿ ಆರೀಫ್ ಎಂಬಾತ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿರುವು ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ಪೊಲೀಸ್ ನಿರೀಕ್ಷಕ ಪ್ರವೀಣ್ ಕುಮಾರ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 29 ಸಾಕ್ಷಿಗಳಲ್ಲಿ 7 ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟಿತು. ಅದರಂತೆ ಆರೋಪಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5ಸಾವಿರ ರೂ. ದಂಡ ವಿಧಿಸಿ ಆದೇಶಿಸಿತು.

ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. 5ಸಾವಿರ ರೂ.ನಲ್ಲಿ ಒಂದು ಸಾವಿರ ರೂ. ಸರಕಾರಕ್ಕೆ ಮತ್ತು 4ಸಾವಿರ ರೂ. ನೊಂದ ಬಾಲಕಿಗೆ ಹಾಗೂ ನೊಂದ ಬಾಲಕಿಗೆ ಸರಕಾರದಿಂದ 25000ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News