×
Ad

ದಕ್ಷ, ಪಾರದರ್ಶಕ ಆಡಳಿತ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

Update: 2025-06-19 20:14 IST

ಸ್ವರೂಪ ಟಿ.ಕೆ.

ಉಡುಪಿ, ಜೂ.19: ಜಿಲ್ಲೆಯ ಜನತೆಗೆ ದಕ್ಷ ಹಾಗೂ ಪಾರದರ್ಶಕ ಆಡಳಿತದ ಭರವಸೆ ನೀಡಿದ ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬುಧವಾರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಸ್ವರೂಪ ಅವರು, ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಮೊದಲ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಪತ್ರಕರ್ತರಿಂದ ಮಾಹಿತಿಗಳನ್ನು ಕಲೆಹಾಕಿದರು.

ಬೆಂಗಳೂರಿನವಳಾದ ತಾನು ಹೊಸದಿಲ್ಲಿ ಐಐಟಿಯಿಂದ ಟೆಕ್ಸ್‌ಟೈಲ್ ಇಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದು, 1994ರಲ್ಲಿ ಸರಕಾರಿ ಸೇವೆಗೆ ಸೇರಿದೆ. ವಿವಿಧ ಇಲಾಖೆಗಳಲ್ಲಿ ನಾನ್ ಎಸ್‌ಸಿಎಸ್‌ ಗಿರುವ ಶೇ.2 ಆಯ್ಕೆ ಕೋಟಾದ ಮೂಲಕ 2012ರಲ್ಲಿ ಐಎಎಸ್‌ಗೆ ನಿಯುಕ್ತಿಗೊಂಡೆ ಎಂದು ತಮ್ಮನ್ನು ಪರಿಚಯಿಸಿಕೊಂಡರು.

ತಮ್ಮ ಸರಕಾರಿ ಸೇವೆಯ ಬಹುಭಾಗವನ್ನು ಕೈಗಾರಿಕಾ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಳೆದಿರುವು ದಾಗಿ ತಿಳಿಸಿದ ಧಾರವಾಡದಲ್ಲಿ ಎರಡು ವರ್ಷ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಬಳಿಕ ಇದೀಗ ಮೊದಲ ಬಾರಿ ಉಡುಪಿಯಂಥ ಪ್ರಬುದ್ಧ, ವಿದ್ಯಾವಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರಕಿದೆ ಎಂದರು.

ಜಿಲ್ಲಾಧಿಕಾರಿ ಪಾತ್ರವು ಸಾಕಷ್ಟು ಸವಾಲಿನಿಂದ ಕೂಡಿದೆ, ಆದರೆ ನನ್ನ ಅನುಭವ ಮತ್ತು ಮಾಧ್ಯಮ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದ ಅವರು , ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲೆಯ ವಿವಿಧ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೇನೆ. ವಿಷಯ ತಿಳಿದ ಬಳಿಕ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು.

ಬೆಂಗಳೂರಿನವಳಾಗಿ, ಬೆಂಗಳೂರಿನಲ್ಲೇ ಹೆಚ್ಚಿನ ಸಮಯವನ್ನು ಕಳೆದಿರುವು ದರಿಂದ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಸೇವೆ ಸಲ್ಲಿಸಲು ನಾನು ಸಿದ್ಧಳಿದ್ದೇನೆ ಮತ್ತು ರಾಜ್ಯದ ಪ್ರತಿಯೊಂದು ಸ್ಥಳಕ್ಕೂ ಭೇಟಿ ನೀಡಲು ಬಯಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿರ್ಗಮನ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಈಗಾಗಲೇ ಜಿಲ್ಲೆಯ ಕುರಿತು ಸಾಕಷ್ಟು ಮಾಹಿತಿ, ಮಾರ್ಗದರ್ಶನಗಳನ್ನು ನೀಡಿದ್ದಾರೆ. ಆಡಳಿತದಲ್ಲಿ ನಾನು ಈಗಾಗಲೇ ಪಡೆದಿರುವ ಅನುಭವ, ಹಿರಿಯ ಅಧಿಕಾರಿಗಳಿಂದ ಪಡೆಯುವ ಸಲಹೆ, ಮಾಹಿತಿಗಳ ಮೂಲಕ ಕಾನೂನಿನ ಚೌಕಟ್ಟಿನಲ್ಲಿ ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿ ರುವುದಾಗಿ ಸ್ವರೂಪ ಟಿ.ಕೆ. ನುಡಿದರು.

ಉಡುಪಿ ಜಿಲ್ಲೆಯಲ್ಲಿ ಹಲವು ದೀರ್ಘಕಾಲದಿಂದ ಇರುವ ಸಮಸ್ಯೆಗಳಿವೆ. ಮರಳು ಗಣಿಗಾರಿಕೆ, ಸಮುದ್ರ ಕೊರೆತ, 9/11, ಹಕ್ಕುಪತ್ರ ಸೇರಿದಂತೆ ಕಂದಾಯ ಇಲಾಖೆಯ ಹಲವು ಸಮಸ್ಯೆಗಳಿದ್ದು, ಇವುಗಳನ್ನು ಕಾನೂನನಿ ಚೌಕಟ್ಟಿನಲ್ಲಿ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು. ಸದ್ಯ ಜಿಲ್ಲೆಯಲ್ಲಿ ಮಳೆಗಾಲ ವಿದ್ದು, ಪ್ರಾಕೃತಿಕ ವಿಕೋಪದ ಕುರಿತು ಡಾ.ವಿದ್ಯಾ ತಿಳಿಸಿದ್ದಾರೆ. ಈಗಾಗಲೇ ಪ್ರಾರಂಭಿಸಲಾದ ಮುನ್ನೆಚ್ಚ ರಿಕೆ ಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.

ಮಳೆಗೆ ಸಂಬಂಧಿಸಿ ರಜಾದಿನಗಳ ಬಗ್ಗೆ ಡಿಸಿಯಾಗಿ ನೇಮಕಗೊಂಡ ತಕ್ಷಣದಿಂದಲೇ ಸಂದೇಶಗಳು ಬರುತ್ತಿದೆ. ರಾತ್ರಿ 2-3ಗಂಟೆಗೆಲ್ಲಾ ಈಗ ಜೋರಾಗಿ ಮಳೆ ಬರುತ್ತಿದೆ, ರಜೆ ನೀಡುವಂತೆ ಮನವಿ ಮಾಡಿ ಸಂದೇಶ ಬಂದಿತ್ತು ಎಂದು ನಗುತ್ತಾ ಹೇಳಿದ ಅವರು, ಮಳೆಬಾಧಿತ ಪ್ರದೇಶಗಳಿಗೆಲ್ಲಾ ಭೇಟಿ ನೀಡಲು ಉತ್ಸುಕಳಾಗಿದ್ದೇನೆ ಎಂದರು.

ಆರೋಗ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆ, ವಾಸ್ತವದ ಕುರಿತು ತಿಳಿದುಕೊಂಡು ನಿರ್ಧಾರ ತೆಗೆದು ಕೊಳ್ಳುವುದಾಗಿ ತಿಳಿಸಿದರು. ಪರಿಸರ ಸಂರಕ್ಷಣೆ ಮೇಲೆ ಕೇಂದ್ರೀಕರಿಸಿದ ಸಿಎಸ್‌ಆರ್ ಚಟುವಟಿಕೆಗಳನ್ನು ಕೈಗೊಳ್ಳಲು ಹಲವಾರು ಖಾಸಗಿ ಉದ್ಯಮಿ ಗಳು ಮುಂದೆ ಬಂದಿದ್ದಾರೆ. ಈ ಪ್ರದೇಶವು ಸೂಕ್ಷ್ಮ ಪರಿಸರ ವಲಯವಾಗಿದೆ, ಮತ್ತು ಇಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಇತರ ಸ್ಥಳಗಳಂತೆ ಮುಕ್ತವಾಗಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯಲ್ಲಿ ಪಾರದರ್ಶಕ ಮತ್ತು ದಕ್ಷ ಆಡಳಿತ ನೀಡುವ ತಮ್ಮ ಬದ್ಧತೆಯನ್ನು ನೂತನ ಜಿಲ್ಲಾಧಿಕಾರಿ ಮತ್ತೊಮ್ಮೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News