ಕುಂದಾಪುರ ನ್ಯಾಯಾಲಯಕ್ಕೆ ಹಾಜರಾದ ಮೂವರು ನಕ್ಸಲರು
ಕುಂದಾಪುರ: ಕೇರಳ ಹಾಗೂ ಬೆಂಗಳೂರಿನ ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೂವರು ನಕಲ್ಸರನ್ನು ಗುರುವಾರ ಕುಂದಾಪುರದ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಶಂಕರನಾರಾಯಣ, ಅಮಾಸೆಬೈಲು ಹಾಗೂ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ನಕ್ಸಲ್ ಚಟುವಟಿಕೆ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಖುದ್ದು ಹಾಜರುಪಡಿಸಲು ನ್ಯಾಯಾಲಯದ ಸೂಚನೆಯ ಹಿನ್ನೆಲೆಯಲ್ಲಿ ಇಂದು ಹಾಜರು ಪಡಿಸಲಾಯಿತು.
ಕೇರಳದ ವಿಯೂರು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಹಾಗೂ ಬೆಂಗಳೂರಿನ ಜೈಲಿನಲ್ಲಿರುವ ವನಜಾಕ್ಷೀ ಇವರುಗಳನ್ನು ಬಾಡಿ ವಾರೆಂಟ್ ಪಡೆದು ಕುಂದಾಪುರ ದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರೆದುರು ಹಾಜರು ಪಡಿಸಲಾಯಿತು.
ನ್ಯಾಯಾಂಗ ಬಂಧನದಲ್ಲಿರುವ ಇವರಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಇರುವ ಪ್ರಕರಣಗಳ ವಿಚಾರಣೆಗಳು ನ್ಯಾಯಾಲಯ ಗಳಲ್ಲಿ ನಡೆಯುತ್ತಿದ್ದು, ಕುಂದಾಪುರ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಪ್ರಕರಣಗಳ ಕುರಿತ ದೋಷಾರೋಪಣೆಗಳ ಪ್ರಕ್ರಿಯೆ ನಡೆಸಿದ್ದು, ಪ್ರಕರಣಗಳ ವಿಚಾರಣೆಗಾಗಿ ಪ್ರಾಸಿಕ್ಯೂಶನ್‌ಗೆ ಮುಂದಿನ ದಿನಾಂಕ ನಿಗದಿಪಡಿಸಿ ನ್ಯಾಯಾಲಯ ಆದೇಶಿಸಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಈಗ ಜೈಲಿನಲ್ಲಿರುವ ತೊಂಬಟ್ಟು ಲಕ್ಷ್ಮೀ, ಕನ್ಯಾಕುಮಾರಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರೆ, ಈಗಾಗಲೇ ಜಾಮೀನು ಪಡೆದು ಹೊರಗಿರುವ ನೀಲಗುಳಿ ಪದ್ಮನಾಭ ಕೂಡ ವಿಚಾರಣೆ ವೇಳೆ ಖುದ್ದು ಹಾಜರಿದ್ದರೆಂದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಹೆಚ್.ಡಿ.ಕುಲಕರ್ಣಿ ಅವರು ತನಿಖಾ ಉಸ್ತುವಾರಿ ನಿರ್ವಹಿಸುತ್ತಿದ್ದು ಇಂದಿನ ನ್ಯಾಯಾಲಯದ ಪ್ರಕ್ರಿಯೆ ಬಳಿಕ ಮೂವರನ್ನು ಮರಳಿ ನ್ಯಾಯಾಂಗ ಬಂಧನದ ಜೈಲುಗಳಿಗೆ ಕಳುಹಿಸಲಾಗಿದೆ.
ಉಪವಿಭಾಗ ವ್ಯಾಪ್ತಿಯ ಪೊಲೀಸರು, ನಕ್ಸಲ್ ನಿಗ್ರಹ ದಳದವರು (ಎಎನ್‌ಎಫ್), ಕೇರಳ ಪೊಲೀಸರು, ಬೆಂಗಳೂರು ಪೊಲೀಸರು ಆರೋಪಿ ನಕ್ಸಲರನ್ನು ಕುಂದಾಪುರ ನ್ಯಾಯಾಲಯಕ್ಕೆ ಕರೆತಂದಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕಿ ಇಂದಿರಾ ನಾಯ್ಕ್ ಉಪಸ್ಥಿತರಿದ್ದರು.