×
Ad

ಕುಂದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಸಂಸ ಪ್ರತಿಭಟನೆ

Update: 2025-07-18 18:30 IST

ಕುಂದಾಪುರ, ಜು.18: ಉಡುಪಿ ಜಿಲ್ಲೆಯಲ್ಲಿ ಡಿಸಿ ಮನ್ನಾ ಭೂಮಿಗಳನ್ನು ಅರ್ಹ ಭೂರಹಿತ ಪ.ಜಾತಿ/ಪಂಗಡ ಜನರಿಗೆ ಮರುಹಂಚಿಕೆ ಮಾಡಬೇಕು. ಜಿಲ್ಲೆಯ ಅಕ್ರಮ-ಸಕ್ರಮ ಸಮಿತಿಗಳು ಕರ್ನಾಟಕ ಭೂಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇ.50ನ್ನು ದಲಿತ ಸಮುದಾಯಗಳಿಗೆ ಮಂಜೂರು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಪ್ರಧಾನ ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶುಕ್ರವಾರ ಇಲ್ಲಿನ ಆಡಳಿತ ಸೌಧದ ಎದುರು ಕರ್ನಾಟಕ ರಾಜ್ಯದಲ್ಲಿ ಪ.ಜಾತಿ/ಪಂಗಡದ ಭೂಮಿ ಮತ್ತು ವಸತಿ ಹಕ್ಕುಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ತಾಲೂಕು ಕಚೇರಿ ಎದುರು ಹಮ್ಮಿಕೊಂಡ ಪ್ರತಿಭಟನೆಯ ಅಂಗವಾಗಿ ಬಹಿರಂಗ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಡವರ ಐದು ಹತ್ತು ಸೆಂಟ್ಸ್ ಭೂ ಮಂಜೂರಾತಿಗೆ ಹತ್ತೆಂಟು ಕಾರಣ ಹುಡುಕಿ ತೊಂದರೆ ನೀಡಬೇಡಿ. ಅಕ್ರಮ ಸಕ್ರಮ, 94ಸಿ, 94ಸಿಸಿಯಲ್ಲಿ ಕುಂದಾಪುರ, ಬೈಂದೂರು ತಾಲೂಕು ಕಚೇರಿಗಳಲ್ಲಿ ದಲಿತರ ಒಂದೇ ಒಂದು ಕಡತ ಮಂಜೂರಾಗುವುದಿಲ್ಲ. ಏನಾದರೂ ಕಾರಣ ಹುಡುಕಿ ನಿರಾಕರಿಸಲಾಗುತ್ತದೆ. ಆದರೆ ಹಣ ಇದ್ದವರಿಗೆ ಎಕರೆಗಟ್ಟಲೆ ಎಕರೆ ಜಾಗ ಮಂಜೂರಾಗುತ್ತದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಇದರ ವಿರುದ್ಧ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಲಿದೆ. ಎರಡು ತಾಲೂಕಿನ ಅನೇಕ ಗ್ರಾಮ ಗಳಲ್ಲಿ ಡಿಸಿ ಮನ್ನಾ ಭೂಮಿ ಇದೆ. ಇದನ್ನು ದಲಿತರಿಗೆ ಹಂಚಿಕೆ ಮಾಡಬೇಕು. ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿದ ಯಾವುದೇ ವರ್ಗದ ಬಡವರಾದರೂ ಅವರನ್ನು ಒಕ್ಕಲೆಬ್ಬಿಸದೇ ಅವರಿಗೆ ನಿಜವಾದ ಅರ್ಹತೆ ಇದ್ದರೆ ಭೂಮಿ ನೀಡಬೇಕು. ದಲಿತರಿಗಷ್ಟೇ ಎಂದಲ್ಲ, ಎಲ್ಲ ಬಡವರೂ ಮನೆ, ವಸತಿ ಇಲ್ಲದಿದ್ದಲ್ಲಿ ಭೂಮಿ ಪಡೆಯಲು ಅರ್ಹರು. ಕಂದಾಯ ಇಲಾಖೆ ದಲಿತರಿಗೆ ಭೂಮಿ ನೀಡಲು, ದಾಖಲೆಗಳನ್ನು ನೀಡಲು ಸತಾಯಿಸಬಾರದು ಎಂದರು.

ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್. ಮನವಿ ಸ್ವೀಕರಿಸಿ, ದಲಿತರಿಗೆ ಭೂಮಿ ನೀಡುವ ಕುರಿತು ಯಾವುದೇ ವಿಳಂಬ ಮಾಡುವಂತಿಲ್ಲ. ವಿನಾಕಾರಣ ಅರ್ಜಿ ತಿರಸ್ಕರಿಸುವಂತಿಲ್ಲ. ಅರ್ಜಿಗಳನ್ನು ಬಾಕಿ ಇಡುವಂತಿಲ್ಲ. ತಹಶೀಲ್ದಾರ್‌ಗಳಿಗೆ ಈ ಬಗ್ಗೆ ಸೂಚನೆ ನೀಡುವುದಾಗಿ ಹೇಳಿದರು.

ದಸಂಸ ಸಂಘಟನೆ ಕೋಶಾಧಿಕಾರಿ ಚಂದ್ರ ಕೊರ್ಗಿ, ಸಂಘಟನಾ ಸಂಚಾಲಕರಾದ ಉದಯ ಕುಮಾರ್, ಶ್ರೀಕಾಂತ್ ಹಿಜಾಣ, ಚಂದ್ರ ಉಳ್ಳೂರು, ಸತೀಶ್ ರಾಮನಗರ, ಭಾಸ್ಕರ ಆಲೂರು, ಅಶೋಕ ಮೊಳ ಹಳ್ಳಿ, ಪ್ರಶಾಂತ ಹೈಕಾಡಿ, ಮುಖಂಡರಾದ ಸುರೇಶ ಹಕ್ಲಾಡಿ, ಗೋಪಾಲಕೃಷ್ಣ ನಾಡ, ಭವಾನಿ ನಾಯ್ಕ , ರಾಮ ಗುಳ್ಳಾಡಿ, ದಿನೇಶ್ ಹೊಸ್ಮಠ, ಮಂಜುನಾಥ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News