ಉಡುಪಿ: ದಲಿತರ ಭೂಮಿ - ವಸತಿ ಹಕ್ಕಿಗಾಗಿ ಪ್ರತಿಭಟನೆ
ಉಡುಪಿ, ಜು.18: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ರಾಜ್ಯ ಘಟಕದ ಕರೆಯಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಭೂಮಿ ಮತ್ತು ವಸತಿ ಹಕ್ಕುಗಳಿಗೆ ಆಗ್ರಹಿಸಿ ದಸಂಸ ಜಿಲ್ಲಾ ಮತ್ತು ತಾಲೂಕು ಸಮಿತಿಯ ವತಿಯಿಂದ ಇಂದು ಉಡುಪಿ ಬನ್ನಂಜೆಯಲ್ಲಿರುವ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ದಸಂಸ ರಾಜ್ಯ ಸಮಿತಿ ಸಂಚಾಲಕ ಹಾಗೂ ಹಿರಿಯ ದಲಿತ ಮುಖಂಡ ಸುಂದರ್ ಮಾಸ್ಟರ್, ಉಡುಪಿ ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಜಮೀನುಗಳನ್ನು ಅರ್ಹ ಭೂರಹಿತ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಗೆ ಮರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಉಡುಪಿ ಜಿಲ್ಲೆಯ ಅಕ್ರಮ-ಸಕ್ರಮ ಸಮಿತಿಗಳು ಕರ್ನಾಟಕ ಭೂಮಂಜೂರಾತಿ ಅಧಿನಿಯಮದಂತೆ ಲಭ್ಯ ಭೂಮಿಯ ಶೇ.50ರಷ್ಟನ್ನು ದಲಿತ ಸಮುದಾಯಗಳಿಗೆ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಇವು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಉಡುಪಿ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.
ಇಂದಿನ ಪ್ರತಿಭಟನೆಯನ್ನು ಉಡುಪಿ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳ ತಾಲೂಕು ಕಚೇರಿಗಳೆದುರು ನಡೆಸಲಾಯಿತು.
ಉಡುಪಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆ ಹಾಗೂ ತಾಲೂಕಿನ ದಲಿತ ಮುಖಂಡರುಗಳಾದ ಶಂಕರ್‌ದಾಸ್, ಭಾಸ್ಕರ್ ನಿಟ್ಟೂರು, ಪುಷ್ಪರಾಜ್, ಕೃಷ್ಣ ಬೆಳ್ಳೆ, ಲಕ್ಕವ್ವ, ಬಸವರಾಜ್ ಮಣಿಪಾಲ, ಕಿರಣ್, ಲೋಹಿತ್ ಕುಮಾರ್, ರವಿ ಮುಂತಾದವರು ಉಪಸ್ಥಿತರಿದ್ದರು.