×
Ad

ಉಡುಪಿ ತುಳುಕೂಟದಿಂದ ಆಟಿದ ತಿರ್ಲ್ ಕಾರ್ಯಕ್ರಮ

Update: 2025-07-19 19:28 IST

ಉಡುಪಿ, ಜು.19: ಉಡುಪಿ ತುಳುಕೂಟದ ಆಶ್ರಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಟಿದ ತಿರ್ಲ್-2025 ಎಂಬ ವಿನೂತನ ಕಾರ್ಯಕ್ರಮವನ್ನು ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಇಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ತುಳು ಸಂಘದ ವಿದ್ಯಾರ್ಥಿಗಳಾದ ತೆಂಕನಿಡಿಯೂರು ಕಾಲೇಜಿನ ಶರಣ್ಯ, ಶಿರ್ವ ಎಂಎಸ್ ಆರ್‌ಎಸ್ ಕಾಲೇಜಿನ ಶ್ರೇಯಸ್ ಮತ್ತು ಅನೀಶಾ ಭಂಡಾರಿ, ಎಂಜಿಎಂ ಕಾಲೇಜಿನ ಕೃತಿ ಮೂಡಬೆಟ್ಟು, ವಿದ್ಯೋದಯ ಪಿಯು ಕಾಲೇಜಿನ ಭವನಾ, ನಿರಾಲಿ ಮತ್ತು ತ್ರಿಷಾ ಪಿಯು ಕಾಲೇಜಿನ ಅನ್ಯ ಆಚಾರ್ಯ ಸೇರಿಕೊಂಡು ಉದ್ಘಾಟಿಸಿದರು.

ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ತುಳುಸಂಘಗಳ ವಿದ್ಯಾರ್ಥಿಗಳು ತುಳುನಾಡಿನ ವೈವಿಧ್ಯವಯ ಆಹಾರ ತಿನಿಸುಗಳನ್ನು ಅನಾವರಣಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ದೆಂದೂರುಕಟ್ಟೆಯ ಹಿರಿಯ ನಾಟಿ ವೈದ್ಯೆ, ದೃಷ್ಠಿ ನಿವಾಳಿಸುವ ತಜ್ಞೆ ಕಮಲಾ ಮಡಿವಾಳ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳುನಾಡಿನ ಆಚಾರ- ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಕೆಲಸ ಆಗ ಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಬಹಳ ಅಗತ್ಯ ಎಂದು ತಿಳಿಸಿದರು.

ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಬಹಳ ಕಷ್ಟದ ದಿನಗಳು. ಆ ಸಂದರ್ಭದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿ ಇತ್ತು. ಅಂದು ನಮ್ಮ ಹಿರಿಯರು ಸುತ್ತಮುತ್ತಲು ಸಿಗುವ ಸೊಪ್ಪು, ತರಕಾರಿ, ಗೆಡ್ಡೆಗೆಣಸುಗಳನ್ನು ತಿಂದು ದಿನ ಕಳೆಯುತ್ತಿದ್ದರು. ಆದರೆ ಇಂದಿನ ಯುವಪೀಳಿಗೆಗೆ ನಮ್ಮ ಹಿರಿಯರ ಕಷ್ಟದ ದಿನಗಳ ಬಗ್ಗೆ ಗೊತ್ತಿಲ್ಲ. ಇಂದು ಬಹುತೇಕರು ಸುಖದ ಜೀವನವನ್ನೇ ನೋಡುತ್ತಿದ್ದಾರೆ. ಆದ್ದರಿಂದ ಇಂದಿನ ಯುವ ಪೀಳಿಗೆಗೆ ತುಳುನಾಡಿನ ಸಂಸ್ಕೃತಿ, ಹಿರಿಯರು ಯಾವ ರೀತಿ ಜೀವನ ನಡೆಸುತ್ತಿದ್ದರು ಎಂಬುವುದರ ಬಗ್ಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.

ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು. ಆಟಿದ ತಿರ್ಲ್ ಸಂಚಾಲಕಿಯ ರಾದ ತಾರಾ ಸತೀಶ್ ಸ್ವಾಗತಿಸಿದರು. ಪೂರ್ಣಿಮಾ ಶೆಟ್ಟಿ ವಂದಿಸಿದರು. ಯಶೋದ ಕೇಶವ್ ಹಾಗೂ ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News