×
Ad

ಯಕ್ಷಗಾನ ಸರ್ವವ್ಯಾಪಿ ಕಲೆ: ಡಾ.ಎಚ್.ಎಸ್.ಬಲ್ಲಾಳ್

Update: 2025-07-19 19:38 IST

ಉಡುಪಿ, ಜು.19: ಯಕ್ಷಗಾನ ಕಲೆ ಇತ್ತೀಚಿನ ದಿನಗಳಲ್ಲಿ ಸರ್ವವ್ಯಾಪ್ತಿ ಯಾಗಿದೆ. ಯುವ ಜನತೆಯಲ್ಲಿ ಇಂದು ಯಕ್ಷಗಾನದ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದೆ. ಕಲೆ ಉಳಿಯಬೇಕಾದರೆ ಕಲೆಯ ಬಗ್ಗೆ ಯುವ ಜನತೆಯಲ್ಲಿ ಆಸಕ್ತಿ ಮೂಡಿಸಿ ಬೆಳೆಸಬೇಕು ಎಂದು ಮಣಿಪಾಲ ಮಾಹೆಯ ಸಹ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.

ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಉಜ್ವಲ್ ಡೆವಲಪರ್ಸ್‌ ಸಹಯೋಗದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ವತಿಯಿಂದ ಅಜ್ಜರಕಾಡಿನ ಪುರಭವನದಲ್ಲಿ ಶನಿವಾರ ಆಯೋಜಿಸಲಾದ ಯಕ್ಷಗಾನ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಗುರು ಮಟಪಾಡಿ ವೀರಭದ್ರ ನಾಯಕ ಯಕ್ಷ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.

ಯಕ್ಷಗಾನದ ಬಗ್ಗೆ ಮಕ್ಕಳಲ್ಲಿಯೂ ಹೆಚ್ಚಿನ ಆಸಕ್ತಿ ಬೆಳೆಸಯುತ್ತಿದೆ. ಮಾಹೆಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಹೆಚ್ಚಿನ ಬೇಡಿಕೆ ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಅಲ್ಲದೆ ಮಾಹೆಯೂ ಯಕ್ಷಗಾನಕ್ಕೆ ಸರ್ವರೀತಿಯ ಪ್ರೋತ್ಸಾಹ ನೀಡುತ್ತಿದೆ. ಈ ವರ್ಷದಿಂದ ಮಾಹೆಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಜಲವಳ್ಳಿ ವಿದ್ಯಾಧರ ರಾವ್ ಅವರಿಗೆ ಯಕ್ಷ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಸದಸ್ಯ ಭುವನ ಪ್ರಸಾದ್ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ.ಜಿ.ಶಂಕರ್ ಶುಭ ಹಾರೈಸಿದರು ಉಜ್ವಲ್ ಡೆವಲಪರ್ಸ್‌ ಪ್ರವರ್ತಕ ಪುರುಷೋತ್ತಮ ಶೆಟ್ಟಿ ಹಾಗೂ ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

ಗುರು ಉಮೇಶ್ ಸುವರ್ಣ ಪ್ರಾರ್ಥಿಸಿದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News