ಉಡುಪಿ: ತ್ಯಾಜ್ಯನೀರಿನ ಸಮರ್ಪಕ ನಿರ್ವಹಣೆಗೆ ಭಾಗೀದಾರರ ಸಭೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇನ್ನೂ ನಿರ್ಮಾಣಗೊಳ್ಳದ ಹಿನ್ನೆಲೆಯಲ್ಲಿ ವಿವಿಧ ವಾರ್ಡ್ ವ್ಯಾಪ್ತಿಯ ವಸತಿ ಸಮುಚ್ಛಯ, ವಾಣಿಜ್ಯ ಮಳಿಗೆ ಹಾಗೂ ಹೊಟೇಲ್‌ಗಳಿಂದ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವ ಬಗ್ಗೆ ಸಂಬಂಧಿತ ಭಾಗೀದಾರ ರೊಂದಿಗೆ ಇಂದು ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಶಾಸಕ ಯಶಪಾಲ್ ಸುವರ್ಣರ ನೇತೃತ್ವದಲ್ಲಿ ಸಮಾಲೋಚನಾ ಸಭೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ, ನಗರಸಭಾ ವ್ಯಾಪ್ತಿಯಲ್ಲಿ ಯುಜಿಡಿ (ಒಳಚರಂಡಿ) ವ್ಯವಸ್ಥೆ ಇನ್ನೂ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ತ್ಯಾಜ್ಯನೀರಿನ ಸಮರ್ಪಕ ನಿರ್ವಹಣೆಗೆ ಬೇಕಾದ ಸಂಸ್ಕರಣಾ ಘಟಕದ ನಿರ್ಮಾಣಕ್ಕೆ ಎದುರಾಗಿರುವ ಸಮಸ್ಯೆಗಳ ಕುರಿತು ವಿವರಿಸಿದರು.
ಸದ್ಯಕ್ಕೆ ನಗರದಲ್ಲಿ ಹಳೆಯ ಪುರಸಭಾ ವ್ಯಾಪ್ತಿಯಲ್ಲಿ ಮಾತ್ರ ಯುಜಿಡಿ ಇದ್ದು, ನಗರಸಭೆಯಾಗಿ ಮೇಲ್ದರ್ಜೆಗೇರುವಾಗ ಸೇರ್ಪಡೆಗೊಂಡ ಪ್ರದೇಶಗಳಲ್ಲಿ ಇನ್ನೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಮಣಿಪಾಲದಂಥ ಎತ್ತರದ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆಯೇ ಒಂದು ಸವಾಲಾ ಗಿದೆ. ಅದಕ್ಕೆ ಪ್ರತ್ಯೇಕ ನಿರ್ವಹಣಾ ಘಟಕ ಬೇಕಾಗುತ್ತದೆ. ಇದಕ್ಕೆ ಬೇಕಾದ ಭೂಮಿ ಸಿಗುವುದೇ ಕಷ್ಟವೆನಿಸಿದೆ ಎಂದರು.
ನಗರಸಭೆಗೆ ಒಳಚರಂಡಿ ವ್ಯವಸ್ಥೆಯ ಪ್ರಸ್ತಾಪವನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದೆ. ಹಿಂದೆ ಸುಮಾರು 400 ಕೋಟಿ ರೂ.ಗಳ ಅಂದಾಜು ಮೊತ್ತ ಇಂದು ಸಾವಿರಾರು ಕೋಟಿಗೆ ಏರಿದೆ. ಆದರೂ ಅದನ್ನು ಅನುಷ್ಠಾನ ಗೊಳಿಸುವುದು ಅಷ್ಟು ಸುಲಭವಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದರು.
ಇದೀಗ ಉಡುಪಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವೂ ಚಾಲ್ತಿ ಯಲ್ಲಿದೆ. ಆದುದರಿಂದ ಸಮರ್ಪಕ ಒಳಚರಂಡಿ ವ್ಯವಸ್ಥೆ ಬೇಕೇಬೇಕಾಗಿದೆ. ಅಲ್ಲಿಯವರೆಗೆ ತ್ಯಾಜ್ಯ ನೀರಿನ ಸಮಸ್ಯೆಯನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಬಗ್ಗೆ ಭಾಗೀದಾರರಾಗಿ ರುವ ವಸತಿ ಸಮುಚ್ಛಯ ಹಾಗೂ ವಾಣಿಜ್ಯ ಮಳಿಗೆಗಳವರು ಸಲಹೆ ನೀಡಬೇಕು. ನಗರದ ಅಭಿವೃದ್ಧಿ, ಸ್ವಚ್ಛತೆ ದೃಷ್ಟಿಯಿಂದ ಎಲ್ಲರೂ ಇದರಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಡುಪಿಯ ೧೫೦ಕ್ಕೂ ಅಧಿಕ ಮಂದಿ ಬಿಲ್ಡರ್‌ಗಳು, ಗುತ್ತಿಗೆದಾರರರು, ವಿವಿಧ ಪ್ಲಾಟ್‌ಗಳ ಮಾಲಕರು ಆಗಮಿಸಿ ತಾವು ಎದುರಿಸುತ್ತಿರುವ ಸಮಸ್ಯೆಗಳು, ನಗರಸಭೆಯಿಂದ ತಮಗಿರುವ ನಿರೀಕ್ಷೆ ಗಳ ಕುರಿತು ವಿವರಿಸಿದರು. ನಗರಕ್ಕೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ನಗರಸಭೆಯ ಜವಾಬ್ದಾರಿಯಾಗಿದ್ದು, ನಗರಸಭೆಯೊಂದಿಗೆ ಕೈಜೋಡಿಸಲು ಸಿದ್ಧ ಎಂದರು.
ಈಗ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವುದರಿಂದ ಇಂದ್ರಾಳಿ, ಲಕ್ಷೀಂದ್ರ ನಗರ, ಪೆರಂಪಳ್ಳಿ ಮುಂತಾದ ಕಡೆಗಳ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಲ್ಲಿನ ನಿವಾಸಿಗರು ವಿವರಿಸಿದರು. ವಸತಿ ಸಮುಚ್ಛಯ ನಿರ್ಮಾಣಗೊಳ್ಳುವಾಗಲೇ ನಗರಸಭೆ ಈ ಬಗ್ಗೆ ದೊಡ್ಡ ಮೊತ್ತವನ್ನು ಪಡೆಯುತ್ತಿದೆ. ಮತ್ತೆ ಈಗ ಪಿಟ್ ಟ್ಯಾಂಕ್ ನಿರ್ವಹಣೆಗೆಂದು ಸಾವಿರಾರು ರೂ.ನೀಡಲು ಕಷ್ಟವಾಗುತ್ತಿದೆ ಎಂದು ಹಲವರು ದೂರಿಕೊಂಡರು.
ವಸತಿ ಸಮುಚ್ಚಯ/ವಾಣಿಜ್ಯ ಮಳಿಗೆಗಳು ತ್ಯಾಜ್ಯನೀರನ್ನು ಓಪನ್ ಚರಂಡಿಗೆ, ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟಾಗಿ ಮಲೇರಿಯಾ, ಡೆಂಗಿಯಂಥ ರೋಗಗಳು ಹರಡುವ ಭೀತಿಯೊಂದಿಗೆ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ ಎಂದು ಹಲವರು ದೂರಿಕೊಂಡರು.
ಆದರೆ ಸಭೆಯಲ್ಲಿ ಯಾವುದೇ ಒಮ್ಮತದ ಅಭಿಪ್ರಾಯ ವ್ಯಕ್ತವಾಗಲಿಲ್ಲ. ಇಂದು ಉಡುಪಿಯ ಸಾರ್ವಜನಿ ಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದು, ಮುಂದೆ ಇನ್ನಷ್ಟು ಮಂದಿಯೊಂದಿಗೆ ಸಮಾಲೋಚನೆ ನಡೆಸಿ, ತ್ಯಾಜ್ಯ ಸಮಸ್ಯೆಗೆ ಏನಾದರೂ ಪರಿಹಾರೋಪಾಯ ಕಂಡುಕೊಂಡು ಅದನ್ನು ಇನ್ನೊಂದು ಸಭೆಯಲ್ಲಿ ಮಂಡಿಸುವುದಾಗಿ ಶಾಸಕರು ತಿಳಿಸಿದರು.
ಸಭೆಯಲ್ಲಿ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಸುಂದರ ಕಲ್ಮಾಡಿ, ನಗರಸಭೆಯ ಪರಿಸರ ಇಂಜಿನಿಯರ್ ರವಿಪ್ರಕಾಶ್, ನಗರಸಭೆಯ ಸದಸ್ಯರು, ನಗರದ 100ಕ್ಕೂ ಅಧಿಕ ಅಪಾರ್ಟ್‌ಮೆಂಟ್ ಹಾಗೂ ವಸತಿ ಸಮುಚ್ಛಯಗಳ ಬಿಲ್ಡರ್‌ಗಳು, ಗುತ್ತಿಗೆದಾರರು ಹಾಗೂ ಫ್ಲಾಟ್ ಮಾಲಕರು ಭಾಗವಹಿಸಿದ್ದರು.