×
Ad

ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಮೀನಾಮೇಷ: ಸದಸ್ಯರ ಆಕ್ರೋಶ

Update: 2025-07-31 22:03 IST

ಕುಂದಾಪುರ, ಜು.31: ನಗರದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಿ, ವೃತ್ತ ರಚಿಸುವ ಬಗ್ಗೆ ಗುರುವಾರ ನಡೆದ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆದಿದ್ದು, ತಳಸಮುದಾಯದ ನಾಯಕನ ಪುತ್ಥಳಿ ನಿರ್ಮಾಣಕ್ಕೆ ವಿರೋಧ ಬರುವುದರ ಹಿಂದೆ ಯಾರ ಕೈವಾಡವಿದೆ ಎಂದು ಸದಸ್ಯರು ಪುರಸಭಾ ಮುಖ್ಯಾಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು.

ಪುರಸಭಾ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ಹಿಂದಿನ ಸಭೆಗಳಲ್ಲಿ ಮಾಡಿದ ಸರ್ವಾನುಮತದ ನಿರ್ಣಯ ಇದ್ದರೂ ಪೊಲೀಸರಿಂದ ಆಕ್ಷೇಪ ಬಂದಿರುವುದನ್ನು ಉಲ್ಲೇಖಿಸಿ, ಸದಸ್ಯರಾದ ಗಿರೀಶ್ ಜಿ.ಕೆ., ಚಂದ್ರಶೇಖರ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ. ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಪೊಲೀಸರಲ್ಲಿ ಕೇಳಿ ಪುರಸಭೆ ಮಾಡುವುದಲ್ಲ. ಸುಪ್ರಿಂಕೋರ್ಟ್ ತೀರ್ಪು ಉಲ್ಲೇಖಿಸಿ ಪೊಲೀಸರು ಆಕ್ಷೇಪಿಸಿದರೆ, ತೀರ್ಪಿನ ಬಳಿಕ ದೇಶದಲ್ಲಿ ಒಂದೇ ಒಂದು ಪ್ರತಿಮೆ, ವೃತ್ತ ನಿರ್ಮಾಣ ನಡೆಯಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಲೆಕ್ಕಾಧಿಕಾರಿ ಸಭೆಗೆ ಹಾಜರಾಗಿಲ್ಲ, ತಪ್ಪು ಮಾಹಿತಿ ನೀಡುತ್ತಾರೆ. ಸದಸ್ಯರ ಹಕ್ಕುಚ್ಯುತಿ ಆಗುತ್ತಿದೆ. ಲೆಕ್ಕಪತ್ರ ಸರಿ ಇಲ್ಲ ಎಂದು ಉಲ್ಲೇಖಿಸಿದ ನಿರ್ಣಯ ವನ್ನೇ ಬರೆಯಲಿಲ್ಲ ಎಂದು ಗಿರೀಶ್, ಶ್ರೀಧರ ಶೇರೆಗಾರ್, ಚಂದ್ರಶೇಖರ ಖಾರ್ವಿ ಹೇಳಿದರು. ಮುಂದಿನ ಸಭೆಗೆ ಕರೆಸಲಾಗುವುದು ಎಂದು ಮುಖ್ಯಾಧಿಕಾರಿ ಆನಂದ್ ಜೆ.ಸಮಜಾಯಿಷಿ ನೀಡಿದರು.

ಹೆದ್ದಾರಿ, ಸರ್ವಿಸ್ ರಸ್ತೆ ಸಮಸ್ಯೆ ಬಗ್ಗೆ ಪುರಸಭೆಯ ನಿರ್ಣಯ, ಒತ್ತಾಯ ಗಳನ್ನು ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಬಳಿ ನಿಯೋಗ ಕೊಂಡೊಯ್ದು ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕು ಎಂದು ಗಿರೀಶ್ ಅಧ್ಯಕ್ಷರನ್ನು ಒತ್ತಾಯಿಸಿದರು.ಸಂಸದರ ಬಳಿ ಹೇಳಿದರೂ ಪ್ರಾಧಿಕಾರದವರು ಸ್ಪಂದಿಸಲಿಲ್ಲ ಎಂದು ಅಧ್ಯಕ್ಷರು ಉತ್ತರಿಸಿ , ಡಿಸಿ ಬಳಿ ಹೋಗುವ ಸೂಚನೆಗೆ ಸಮ್ಮತ ವ್ಯಕ್ತಪಡಿಸಿದರು.

ಭಂಡಾರ್ಕಾರ್ಸ್ ರಸ್ತೆಯಲ್ಲೇ ಅಂಗಡಿ ಕಟ್ಟಡಗಳ ಮುಂಭಾಗ ರಸ್ತೆಗೆ ಬಂದಿದೆ. ಅಡ್ಡಾದಿಡ್ಡಿ ವಾಹನ ನಿಲ್ಲು ತ್ತವೆ ಎಂದು ಗಿರೀಶ್ ಹೇಳಿದರೆ, ಕಾಲೇಜು ರಸ್ತೆ ಪಾರ್ಕಿಂಗ್ ಸಮಸ್ಯೆ ನಿವಾರಣೆಯಾಗಿಲ್ಲ. ಫಲಕ ಅಳವಡಿಸಿಲ್ಲ. ಯುವಕರು ದ್ವಿಚಕ್ರ ವಾಹನ ವೀಲಿಂಗ್ ಮಾಡುತ್ತಾರೆ. ಅನೇಕ ಮೀಟಿಂಗ್‌ಗಳಲ್ಲಿ ಈ ಬಗ್ಗೆ ದೂರಿದರೂ ಪರಿಹಾರ ದೊರೆಯಲಿಲ್ಲ ಎಂದು ರೋಹಿಣಿ ಉದಯ ಕುಮಾರ್ ಹೇಳಿದರು.

ಕೋಡಿ ಚರಂಡಿ ಕಾಮಗಾರಿ ನಿರ್ಣಯ ಆದರೂ ಕಾಮಗಾರಿ ಮಾತ್ರ ಇನ್ನೂ ಶುರುವಾಗಿಲ್ಲ ಎಂದು ಅಶ್ಪಕ್ ಕೋಡಿ ಹೇಳಿದರು. ಸ್ಥಳ ತನಿಖೆ ಮಾಡಿ ಅಂದಾಜುಪಟ್ಟಿ ತಯಾರಿಸಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು. ಕೋಡಿಯಲ್ಲಿ ಬೀದಿದೀಪಕ್ಕೆ ಕಂಬ ನೀಡಲಾಗಿದೆ, ದೀಪ ನೀಡಿಲ್ಲ ಎಂದಾಗ ಎರಡೂ ಗುತ್ತಿಗೆದಾರರು ಬೇರೆ ಎನ್ನುವ ಉತ್ತರ ಬಂತು.

ನನ್ನ ವಾರ್ಡ್‌ಗೆ 4 ವರ್ಷದಿಂದ ವಿದ್ಯುತ್ ಕಂಬ ನೀಡಿಲ್ಲ, ರಿಕ್ಷಾ ನಿಲ್ದಾಣ ಬಳಿ ಬೀದಿದೀಪ ಅಳವಡಿಸಿ ಎಂದು ಪ್ರಭಾವತಿ ಶೆಟ್ಟಿ ಮನವಿ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ವನಿತಾ ಬಿಲ್ಲವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News