×
Ad

ಎನ್‌ಹೆಚ್ 169 ಸಾಣೂರು-ಮಾಳ - ಭೂಸ್ವಾಧೀನದ ಪರಿಹಾರದಲ್ಲಿ ತಾರತಮ್ಯ: ಭೂಮಾಲಕರ ಆರೋಪ

Update: 2025-12-30 17:55 IST

ಕಾರ್ಕಳ: ರಾಷ್ಟ್ರೀಯ ಹೆದ್ದಾರಿ169ರ ರಸ್ತೆ ಅಗಲೀಕರಣದ ಬಿಕರ್ನಕಟ್ಟೆ-ಸಾಣೂರು ಯೋಜನೆಯ ಸಾಣೂರು- ಮಾಳ ಮುಂದುವರಿದ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪರಿಹಾರದಲ್ಲಿ ಭಾರಿ ತಾರತಮ್ಯ ನಡೆದಿದೆ ಎಂದು ಭೂ ಮಾಲೀಕರು ಆರೋಪ ಮಾಡಿದ್ದಾರೆ.

ಕಾರ್ಕಳ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭೂಮಾಲೀಕರ ಪರವಾಗಿ ಪ್ರೇಮಲತಾ ರತ್ನಾಕರ ಶೆಟ್ಟಿಯವರು ಮಾತನಾಡಿದರು.

ಸಾಣೂರು ಬಿಕರ್ನಕಟ್ಟೆ ನೀಡಿದ ಪರಿಹಾರವೆ ಸಾಣೂರು ಮಾಳದ ವರೆಗೆ ಪರಿಗಣಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ 169 ಸಾಣೂರು ಮಾಳ ಭೂ ಮಾಲೀಕರ ಹೋರಾಟ ಸಮಿತಿ ಸರಕಾರವನ್ನು ಒತ್ತಾಯಿಸಿದರು.

ಸಾಣೂರು -ಮಾಳ ಮಾರ್ಗದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನೋಟಿಫಿಕೇಶನ್‌ನಲ್ಲಿ ಗುರುತಿಸಲ್ಪಟ್ಟ ಜಮೀನು ಗಳಿಗೆ ಬೇರೆ ನಿಯಮಗಳು ಹಾಗೂ ವಿಭಿನ್ನ ವಿಧಾನಗಳನ್ನು ಅನುಸರಿಸಿ ಪರಿಹಾರ ನಿಗದಿಪಡಿಸ ಲಾಗಿದೆ. ಇದರ ಪರಿಣಾಮವಾಗಿ ಸಾಣೂರಿನಿಂದ ಮಾಳದವರೆಗಿನ ಭೂಮಾಲೀಕರ ಜಮೀನುಗಳಿಗೆ ಅತ್ಯಂತ ಕಡಿಮೆ ಮೌಲ್ಯ ನಿರ್ಧರಿಸಲಾಗಿದೆ ಎಂದು ಅವರು ಆರೋಪಿಸಿದರು.

ಕೃಷಿ ಭೂಮಿಗೆ ಮೌಲ್ಯ ನಿರ್ಧರಿಸುವ ವೇಳೆ 12.5 ಸೆಂಟ್ಸ್ ಹಾಗೂ ಅದಕ್ಕಿಂತ ಕಡಿಮೆ ವಿಸ್ತೀರ್ಣದ ಭೂಮಿ ಗಳ ಅಂಕಿ-ಅಂಶಗಳನ್ನು ಪರಿಗಣಿಸದೇ ಅತೀ ಕಡಿಮೆ ಮೌಲ್ಯ ನಿಗದಿಪಡಿಸ ಲಾಗಿದೆ. ಇದು ಪ್ರಾಧಿಕಾರದ ಮಾರ್ಗ ಸೂಚಿಗೆ ವಿರುದ್ಧವಾಗಿದ್ದು, ಕೃಷಿಕರಿಗೆ ಭಾರೀ ಅನ್ಯಾಯವಾಗಿದೆ ಎಂದರು.

ಜಮೀನಿನಲ್ಲಿ ಇರುವ ಕಟ್ಟಡಗಳ ಮೌಲ್ಯಮಾಪನದಲ್ಲಿಯೂ ಇದೇ ರೀತಿಯ ತಾರತಮ್ಯ ಅನುಸರಿಸಲಾಗಿದೆ. ಮೂಲ ಮೌಲ್ಯದಲ್ಲಿಯೇ ವ್ಯತ್ಯಾಸ ಮಾಡಲಾಗಿದ್ದು, ನಂತರ ಸವಕಳಿ ನೆಪದಲ್ಲಿ 30-40 ಶೇಕಡಾ ವರೆಗೆ ಅಪಮೌಲ್ಯ ಮಾಡಿ ಕಟ್ಟಡ ಮಾಲೀಕರಿಗೂ ಅನ್ಯಾಯ ಮಾಡಲಾಗಿದೆ.

ಇಲ್ಲಿ ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ತಿರುಚಿ ಪರಿಹಾರ ನಿರ್ಧರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಹೆದ್ದಾರಿ ನಿರ್ಮಾಣಕ್ಕೆ ನೇಮಕಗೊಂಡ ಸಂಸ್ಥೆಯವರು ಭೂಮಾಲೀಕರನ್ನು ಪುಸಲಾಯಿಸುವುದು ಹಾಗೂ ಬೆದರಿಸುವ ಮೂಲಕ ಜಮೀನು ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. 3ಉ ಅವಾರ್ಡ್ ನೀಡುವ ಮೊದಲು ಹಾಗೂ ಪರಿಹಾರ ನೀಡದೇ ಕೆಲ ಜಮೀನುಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿ ರುವುದು ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಾನ್ ಡಿಸಿಲ್ವ, ಶ್ಯಾಮ್ ಎನ್. ಶೆಟ್ಟಿ, ರತ್ನಾಕರ ಶೆಟ್ಟಿ ಬೆಳುವಾಯಿ, ಜಯರಾಂ ಪೂಜಾರಿ ಬೆಳುವಾಯಿ, ಅನಿತಾ ವೈ.ಎಸ್., ಪದ್ಮನಾಭ ನಾಯ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News