ನ.24-26: ಉಡುಪಿಯಲ್ಲಿ 45ನೇ ಮಂಗಳೂರು ವಿವಿ ಅಥ್ಲೆಟಿಕ್ ಕ್ರೀಡಾಕೂಟ
ಉಡುಪಿ, ನ.22 : 45ನೇ ಮಂಗಳೂರು ವಿವಿ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್ ಶಿಪ್ 2025-26 ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿಯ ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಹಭಾಗಿತ್ವದಲ್ಲಿ ನ.24ರಿಂದ 26ರವರೆಗೆ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆತಿಥೇಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸೋಜನ್ ಕೆ.ಜಿ. ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ನ.24ರಂದು ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟ ನಡೆಯಲಿದ್ದು, ಜಿಲ್ಲೆಯಾದ್ಯಂತ ಇರುವ ವಿಶೇಷ ಶಾಲೆಗಳ 500ಕ್ಕೂ ಅಧಿಕ ಮಕ್ಕಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷ ಮಕ್ಕಳ ಕ್ರೀಡಾಚಟುವಟಿಕೆಗಳಿಗೆ ವೇದಿಕೆ ಒದಗಿಸುವುದು ಹಾಗೂ ವಿಶೇಷ ಮಕ್ಕಳ ಉಸ್ತುವಾರಿ ಶಿಕ್ಷಕರನ್ನು ಗೌರವಿಸುವುದು ಇದರಲ್ಲಿ ಉದ್ದೇಶವಾಗಿದೆ ಎಂದರು.
ನ.25 ಮತ್ತು 26ರಂದು ಮಂಗಳೂರು ವಿವಿ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ. ಮಂಗಳೂರು ವಿವಿ ವ್ಯಾಪ್ತಿಯ ಮೂರು ಜಿಲ್ಲೆಗಳ ಕಾಲೇಜುಗಳ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ 150ಕ್ಕೂ ಅಧಿಕ ಕ್ರೀಡಾ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.
ಮಂಗಳೂರು ವಿವಿ, ಇತ್ತೀಚಿನ ಹಲವು ವರ್ಷಗಳಲ್ಲಿ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ತಂಡವಾಗಿ ಮೂಡಿಬರುತಿದ್ದು, ಹೀಗಾಗಿ ಈ ಬಾರಿಯ ವಿವಿ ತಂಡದ ಆಯ್ಕೆಗೆ ಮಾನದಂಡವಾಗಿ ಈ ಕೂಟ ವಿಶೇಷ ಮಹತ್ವ ಪಡೆದಿದೆ ಎಂದರು.
ಪ್ರೊ.ಕಿಶೋರ್ ಹೆಸರಿನಲ್ಲಿ ರೋಲಿಂಗ್ ಟ್ರೋಫಿ :
ಮಂಗಳೂರು ವಿವಿ ಅಥ್ಲೆಟಿಕ್ ಕೂಟದಲ್ಲಿ ಪುರುಷರ ವಿಭಾಗದ ತಂಡ ಪ್ರಶಸ್ತಿ ಪಡೆಯುವ ತಂಡಕ್ಕೆ ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರಿನ ನೀಡಿದ ಟ್ರೋಫಿ ಹಾಗೂ ಮಹಿಳಾ ವಿಭಾಗದ ಚಾಂಪಿಯನ್ ತಂಡಕ್ಕೆ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ನೀಡಿದ ಟ್ರೋಫಿಯನ್ನು ನೀಡಲಾಗುತ್ತಿದೆ.
ಇದೀಗ ಚಾಂಪಿಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆಲ್ಲುವ ತಂಡಕ್ಕೆ ಇದೇ ಮೊದಲ ಬಾರಿ ಪ್ರೊ.ಕಿಶೋರ್ ಕುಮಾರ್ ಸಿ.ಕೆ.ಹೆಸರಿನಲ್ಲಿ ರೋಲಿಂಗ್ ಟ್ರೋಫಿಯನ್ನು ನೀಡಲಾಗುತ್ತದೆ. ಈ ಟ್ರೋಫಿಯ ಅನಾವರಣವೂ ನ.25ರಂದು ಬೆಳಗ್ಗೆ 9:30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂಡಬಿದರೆ ಆಳ್ವಾಸ್ ನ ಡಾ.ಮೋಹನ್ ಆಳ್ವ ಈ ಟ್ರೋಫಿಯನ್ನು ಅನಾವರಣಗೊಳಿಸುವರು ಎಂದರು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಬಹುಕಾಲ ಸೇವೆ ಸಲ್ಲಿಸಿದ್ದ ಪ್ರೊ.ಕಿಶೋರ್ ಕುಮಾರ್ ಸಿ.ಕೆ. ಬಳಿಕ ರಿಜಿಸ್ಟ್ರಾರ್ ಆಗಿ ಹಾಗೂ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕಳೆದ ಅ.5ರಂದು ನಿಧನರಾದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಈ ಬೆಳ್ಳಿಯ ಟ್ರೋಫಿಯನ್ನು ಅವರ ಅಭಿಮಾನಿಗಳು ನೀಡಿದ್ದಾರೆ ಎಂದು ಪ್ರೊ.ಸೋಜನ್ ತಿಳಿಸಿದರು.
ನ.24ರ ವಿಶೇಷ ಮಕ್ಕಳ ಕ್ರೀಡಾಕೂಟವನ್ನು ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರೆ, ನ.25ರ ಮಂಗಳೂರು ವಿವಿ ಅಥ್ಲೆಟಿಕ್ ಕೂಟವನ್ನು ಬೆಳಗ್ಗೆ 9:30ಕ್ಕೆ ಮಂಗಳೂರು ವಿವಿ ಕುಲಪತಿಗಳಾದ ಡಾ.ಪಿ.ಎಲ್.ಧರ್ಮ ಉದ್ಘಾಟಿಸುವರು. ಮಂಗಳೂರು ವಿಭಾಗ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೊ.ಕೆ.ಆರ್.ಕವಿತಾ, ಉದ್ಯಮಿ ಡಾ.ಜಿ.ಶಂಕರ್, ಡಾ.ಮೋಹನ್ ಆಳ್ವ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು.
ಕ್ರೀಡಾಕೂಟದ ಸಮಾರೋಪ ಸಮಾರಂಭ ನ.26ರ ಅಪರಾಹ್ನ 3:30ಕ್ಕೆ ನಡೆಯಲಿದ್ದು, ಮಂಗಳೂರು ವಿವಿ ರಿಜಿಸ್ಟ್ರಾರ್ ರಾಜು ಮೊಗವೀರ, ಉಡುಪಿಯ ಎಡಿಸಿ ಅಬಿದ್ ಗದ್ಯಾಳ್, ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ ಡಿಸೋಜ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದು ಪ್ರೊ. ಸೋಜನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಕೆ., ಪ್ರೊ.ಕೃಷ್ಣ ಭಟ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಚ್ಚೇಂದ್ರ,ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.