ಪರಶುರಾಮ ಥೀಮ್‌ಪಾರ್ಕ್ ಪ್ರಕರಣ; ಸರಕಾರದ ನಿರ್ದೇಶನದಂತೆ ಕ್ರಮ: ಉಡುಪಿ ಡಿಸಿ ಡಾ. ವಿದ್ಯಾಕುಮಾರಿ
ಉಡುಪಿ, ಸೆ.11: ಕಾರ್ಕಳ ತಾಲೂಕಿನ ಬೈಲೂರು ಪರಶುರಾಮ ಥೀಮ್ ಪಾರ್ಕ್‌ನ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಜನರ ಆರೋಪ ಮತ್ತು ಬೇಡಿಕೆಗಳ ಕುರಿತ ಸಂಪೂರ್ಣ ಮಾಹಿತಿ ಯನ್ನು ರಾಜ್ಯ ಸರಕಾರಕ್ಕೆ ನೀಡಲಾಗಿದ್ದು, ಅಲ್ಲಿಂದ ಬರುವ ನಿರ್ದೇಶನದಂತೆ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಒಟ್ಟು 12.5 ಕೋಟಿ ರೂ. ವೆಚ್ಚದಲ್ಲಿ ಥೀಮ್‌ಪಾರ್ಕ್ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆಯಿಂದ ಎರಡು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಯಾವುದೇ ಇಲಾಖೆಯಿಂದ ಹಣ ನೀಡಿಲ್ಲ. ಈ ಕಾಮಗಾರಿಗೆ ಪ್ರವಾಸೋದ್ಯಮ ಇಲಾಖೆ ಆಡಳಿತ್ಮಾಕ ಅನುಮೋದನೆ ನೀಡಿರುವುದರಿಂದ ಈಗಾಗಲೇ ಈ ಕುರಿತು ಮಾಹಿತಿಯನ್ನು ಅವರಿಗೆ ನೀಡಲಾಗಿದೆ. ಇದೀಗ ಪತ್ರ ಕೂಡ ಬರೆಯಲಾಗಿದೆ ಎಂದರು.
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹಗರಣದ ಆರೋಪದ ಬಗ್ಗೆಯೂ ಸಂಬಂಧ ಅಧಿಕಾರಿಯಿಂದ ಮಾಹಿತಿಯನ್ನು ಕೇಳಲಾಗಿದೆ. ಮುಂದೆ ಆ ಕುರಿತು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ವಾರಂಬಳ್ಳಿ ಗ್ರಾಮದಲ್ಲಿ ಐದು ಎಕರೆ ಜಾಗವನ್ನು ಗುರುತಿಸಲಾ ಗಿದೆ. ಇವರಿಗೆ ಮತ್ತೆ ಹೆಚ್ಚುವರಿಯಾಗಿ ಅರ್ಧ ಎಕರೆ ಜಾಗವನ್ನು ನೀಡಲಾಗುತ್ತದೆ. ಮುಂದೆ ಇಎಸ್‌ಐಯವರು ಕೇಂದ್ರ ಸರಕಾರದ ಅನುಮತಿ ಪಡೆದು ಆಸ್ಪತ್ರೆ ನಿರ್ಮಾಣ ಕಾರ್ಯ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಉಡುಪಿ ಜಿಲ್ಲಾಸ್ಪತ್ರೆಯ ಡಯಲೀಸಿಸ್ ಯಂತ್ರದ ಸಮಸ್ಯೆ ಗಮನಕ್ಕೆ ಬಂದಿದ್ದು, ಅಲ್ಲಿರುವ ಎರಡು ಮೂರು ಯಂತ್ರಗಳು ಬಿಟ್ಟರೆ ಉಳಿದವು ಕಾರ್ಯನಿರ್ವಹಿಸುತ್ತಿವೆ. ಈ ಕುರಿತು ರಾಜ್ಯಾದ್ಯಂತ ಒಂದೇ ಸಂಸ್ಥೆಗೆ ಟೆಂಡರ್ ವಹಿಸಿ ಕೊಡಲಾಗಿದೆ. ಆ ಸಂಸ್ಥೆಯವರು ಸಮಪರ್ಕವಾಗಿ ಕೆಲಸ ಮಾಡಿಲ್ಲ ದಿದ್ದರೆ ನೋಟೀಸ್ ಕೊಡಲು ಸೂಚಿಸಿದ್ದೇವೆ. ಅಲ್ಲದೆ ಸರಕಾರಕ್ಕೂ ಪತ್ರ ಬರೆದು ತಿಳಿಸಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಪ್ರಸನ್ನ, ಡಿವೈಎಸ್ಪಿ ದಿನಕರ್ ಉಪಸ್ಥಿತರಿದ್ದರು.
ಬರಪೀಡಿತ ತಾಲೂಕು ಬಗ್ಗೆ ಪರಿಶೀಲನೆ
ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆ ಬಿದ್ದ ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕು ಗಳನ್ನು ಬರಪೀಡಿತ ತಾಲೂಕು ಎಂಬುದಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ತರಬೇತಿ ಪಡೆದ ತಂಡವು ಅಲ್ಲಿನ ಮಳೆ ಪ್ರಮಾಣ, ಮಣ್ಣಿನ ಶುಷ್ಕತೆ ಸೇರಿದಂತೆ ಎಲ್ಲವನ್ನು ಪರಿಶೀಲನೆ ಮಾಡಿ ಮೊಬೈಲ್ ಆ್ಯಪ್ ಮೂಲಕ ಅಪ್‌ಲೋಡ್ ಮಾಡುತ್ತದೆ. ಮುಂದೆ ರಾಜ್ಯ ಸರಕಾರ ಈ ವರದಿಯನ್ನು ಆಧಾರಿಸಿ ಬರಪೀಡಿತ ಪ್ರದೇಶವನ್ನು ಘೋಷಣೆ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದರು.
ಉಡುಪಿ ಜಿಲ್ಲೆಗೆ ಈವರೆಗೆ ನೆರೆ ಪರಿಹಾರ ನಿಧಿ ಬಿಡುಗಡೆಯಾಗಿಲ್ಲ. ಸಣ್ಣ ಪುಟ್ಟ ಹಾನಿಗೆ ಸಂಬಂಧಿಸಿ ಪ್ರಾಕೃತಿಕ ವಿಕೋಪ ನಿಧಿಯಿಂದ ಪರಿಹಾರವನ್ನು ನೀಡಲಾಗುತ್ತದೆ. 2ಲಕ್ಷ ರೂ.ವರೆಗಿನ ಮನೆ, ಶಾಲೆ, ಅಂಗನವಾಡಿ ಕಟ್ಟಡಗಳ ದುರಸ್ತಿ ಕಾಮಗಾರಿಯನ್ನು ನಡೆಸಲಾಗಿದೆ. ದೊಡ್ಡ ಹಾನಿಗೆ ಪರಿಹಾರ ನೀಡಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ವಾರದಲ್ಲಿ 160 ಡೆಂಗ್ಯು ಪ್ರಕರಣ
ಉಡುಪಿ ಜಿಲ್ಲೆಯಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇವಲ ಒಂದೇ ವಾರದಲ್ಲಿ 160 ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲವು ದಿನಗಳ ಹಿಂದೆ 189 ಪ್ರಕರಣಗಳಿದ್ದರೆ ಈಗ ಅದರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದರು.
ಜಿಲ್ಲೆಯ ನಗರ ಪ್ರದೇಶಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಬಿಸಿಲು ಮಳೆ ಯಿಂದಾಗಿ ಸೊಳ್ಳೆ ಉತ್ಪತ್ನಿ ಹೆಚ್ಚಾಗಿ ಜೂನ್ ತಿಂಗಳಿನಿಂದ ಪ್ರಕರಣಗಳು ಜಾಸ್ತಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.