ಪೆರ್ಡೂರು | ಈಜಲು ಹೋದ ಬಾಲಕ ಹೊಳೆಯಲ್ಲಿ ಮುಳುಗಿ ಮೃತ್ಯು
ಶ್ರೀಶಾಂತ್ ಶೆಟ್ಟಿ
ಹಿರಿಯಡ್ಕ, ನ.10: ಮಡಿಸಾಲು ಹೊಳೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಪೆರ್ಡೂರು ಆಲಂಗಾರು ಸಮೀಪ ನಡೆದಿದೆ.
ಮೃತರನ್ನು ಪೆರ್ಡೂರು ಆಲಂಗಾರು ನಿವಾಸಿ ಶ್ರೀಶಾಂತ್ ಶೆಟ್ಟಿ(15) ಎಂದು ಗುರುತಿಸಲಾಗಿದೆ. ರವಿವಾರ ಮಧ್ಯಾಹ್ನ ವೇಳೆ ಶ್ರೀಶಾಂತ್ ಶೆಟ್ಟಿ ತನ್ನ ನೆರೆಮನೆಯ ನವೀನ್ ಎಂಬಾತನ ಜೊತೆ ಸ್ಕೂಟರ್‌ನಲ್ಲಿ ಈಜಲು ಹೋಗಿದ್ದರೆನ್ನಲಾಗಿದೆ.
ಹೊಳೆಯಲ್ಲಿ ಈಜುತ್ತಿದ್ದ ಶ್ರೀಶಾಂತ್ ಶೆಟ್ಟಿ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.
ಈತನೊಂದಿಗೆ ಈಜಲು ಹೋಗಿದ್ದ ನವೀನ್, ಈ ವಿಚಾರವನ್ನು ಮನೆಯಲ್ಲಿ ಹೇಳದೆ ಮುಚ್ಚಿಟ್ಟಿದ್ದನು. ಮನೆಯವರು ಹುಡುಕಾಡಿದಾಗ ಸೋಮವಾರ ಸಂಜೆ 5ಗಂಟೆ ಸುಮಾರಿಗೆ ಮಡಿಸಾಲು ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಶ್ರೀಶಾಂತ್ ಶೆಟ್ಟಿ ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.