ರಾ. ಹೆದ್ದಾರಿ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ: ಹೊಸಾಡು ನಾಗರಿಕರಿಂದ ಎಚ್ಚರಿಕೆ
ಕುಂದಾಪುರ: ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಹೊಸಾಡು ಗ್ರಾಪಂ ವ್ಯಾಪ್ತಿಯ ಮುಳ್ಳಿಕಟ್ಟೆ, ಅರಾಟೆ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲದೆ ಪ್ರತೀ ಮಳೆಗೂ ಅವಾಂತರ ಸೃಷ್ಟಿಯಾಗುತ್ತಿದೆ. ಹೆದ್ದಾರಿ ಕಾಮಗಾರಿ ನಿರ್ವಹಿಸುವವರು ಮೊವಾಡಿಯಿಂದ ಅರಾಟೆಯ ಸೌಪರ್ಣಿಕ ನದಿಯವರೆಗೆ ಸಮರ್ಪಕ ಕಾಂಕ್ರೀಟ್ ಚರಂಡಿ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ನಡೆಸಲಾಗುವುದು ಎಂದು ಹೊಸಾಡು ಗ್ರಾಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಹೊಸಾಡು ಗ್ರಾಪಂ ಸಭಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಸಮರ್ಪಕ ಸರ್ವಿಸ್ ರಸ್ತೆ, ಗ್ರಾಮಸ್ಥರು ಗ್ರಾಪಂ, ವಿಎ ಕಚೇರಿ, ಪಡಿತರ, ಅಂಚೆ ಕಚೇರಿ ಹೀಗೆ ಎಲ್ಲದಕ್ಕೂ ಹೆದ್ದಾರಿ ದಾಟಿ ಬರಬೇಕಾಗಿದೆ. ಆದರೆ ಇಲ್ಲಿನ ಜಂಕ್ಷನ್ ಅಪಾಯಕಾರಿಯಾಗಿದೆ. ಈ ಎಲ್ಲದರ ಬಗ್ಗೆ ನಾವು ಸಂಸದರು, ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು. ಆಗಲೂ ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಒಂದು ದಿನ ಗ್ರಾಮಸ್ಥರೆಲ್ಲ ಸೇರಿ ಹೆದ್ದಾರಿ ತಡೆ ನಡೆಸಲಾಗುವುದು ಎಂದರು.
ಸ್ಥಳೀಯರಾದ ಪ್ರದೀಪ್ ಶೆಟ್ಟಿ ಮಾತನಾಡಿ, ಹೆದ್ದಾರಿ ಅಗಲೀಕರಣ ದಿಂದಾಗಿ ಇಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲ. ಹೆದ್ದಾರಿ, ಗೇರು ನಿಗಮ ಜಾಗದ ನೀರು, ಖಾಸಗಿ ವ್ಯಕ್ತಿಯೊಬ್ಬರ ಜಾಗದ ನೀರು, ಮೊವಾಡಿ ಕಡೆಯಿಂದ ಬರುವಂತಹ ಮಳೆ ನೀರನ್ನೆಲ್ಲ ಹೊಸಾಡು ಕಡೆಗೆ ಬಿಡುತ್ತಿದ್ದು, ಇದರಿಂದ ಕೆಲ ದಿನ ಹಿಂದೆ 7-8 ಮನೆಗಳಿಗೆ ಕಂಪೌಂಡ್ ಗೆ ಹಾನಿಯಾಗಿದೆ. ಬಾವಿ ನೀರು ಕಲುಷಿತಗೊಂಡಿದೆ. 250 ಎಕರೆ ಕೃಷಿ ಭೂಮಿಗೂ ತೊಂದರೆ ಯಾಗುತ್ತಿದೆ. ಕೆಲವರು ಈ ಸಮಸ್ಯೆಯಿಂದ ಕೃಷಿಯಿಂದಲೇ ವಿಮುಖ ರಾಗುತ್ತಿದ್ದಾರೆ. ಅದಕ್ಕೆ ಸುಮಾರು ಒಂದು ಕಿ.ಮೀ.ದೂರದವರೆಗೆ ಕಾಂಕ್ರೀಟ್ ಚರಂಡಿ ಆಗಬೇಕು. ಎರಡೂ ಕಡೆ ಬಸ್ ನಿಲ್ದಾಣ, ಅಂಡರ್ಪಾಸ್ ಅಥವಾ ಮೇಲ್ಸೆತುವೆ ಬೇಡಿಕೆ ನಮ್ಮದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಎಂ.ಎಂ.ಸುವರ್ಣ ಹಾಗೂ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.