×
Ad

‘ಕೊರಗರ ಜಾಗದ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸಿ’

Update: 2024-08-20 21:08 IST

ಕುಂದಾಪುರ, ಆ.20: ಕೊರಗ ಸಮುದಾಯದವರ ಜಾಗದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ, ಕಾನೂನು ವ್ಯಾಪ್ತಿಯಲ್ಲಿ ಬಗೆಹರಿಸಿಕೊಟ್ಟು ಅವರು ಬದುಕು ಕಟ್ಟಿಕೊಳ್ಳಲು ಪೂರಕ ವ್ಯವಸ್ಥೆ ಮಾಡಬೇಕಿರುವುದು ಜನಪ್ರತಿನಿಧಿಗಳು, ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿ. ಈ ನಿಟ್ಟಿನಲ್ಲಿ ಶೀಘ್ರ ಸರ್ವೇ ಕಾರ್ಯ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅರಣ್ಯ, ಕಂದಾಯ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊರಗ ಸಮುದಾಯದವರ ವಿವಿಧ ಸಮಸ್ಯೆಗಳ ಪರಿಹಾರದ ಕುರಿತು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಕರೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕೊರಗ ಸಮುದಾಯದ ಮಂದಿಗೆ ಅಗತ್ಯ ಭೂಮಿ ಸಿಕ್ಕು, ಹಕ್ಕುಪತ್ರ ಸಿಕ್ಕಿದಲ್ಲಿ ಅವರು ಸ್ವಂತ ಕಾಲಮೇಲೆ ನಿಲ್ಲಬಹುದು. ಮೀಸಲು ಅರಣ್ಯ, ವನ್ಯಜೀವಿ ವಲಯ ವ್ಯಾಪ್ತಿಗೊಳಪಡುವಲ್ಲಿ ನೆಲೆಸಿದ ಕೊರಗರಿಗೆ ಹಕ್ಕುಪತ್ರ ವಿದ್ದರೂ ಅಗತ್ಯ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಅರಣ್ಯ ಹಕ್ಕು ಪತ್ರದಿಂದ ಕೊರಗ ನಿವಾಸಿಗಳಿಗೆ ಏನೂ ಸಿಗದು. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಹಾಗೂ ವಿಶೇಷ ಅಭಿಯಾನ ಕಾರ್ಯಕ್ರಮ ನಡೆಸಿ ಭಾಗಶಃ ಡೀಮ್ಡ್ ಇರುವ ಜಾಗಕ್ಕೆ ಹಕ್ಕು ಪತ್ರ ಒದಗಿಸಲು ಇಚ್ಚಾಶಕ್ತಿ ತೋರಬೇಕು. ಹಾಗೆಯೇ ಸಂಪೂರ್ಣ ಡೀಮ್ಡ್ ಇರುವ ಜಾಗಕ್ಕೆ ಏನು ಮಾಡಿದರೆ ಸೂಕ್ತ ಎಂಬುದನ್ನು ಅರಣ್ಯ ಇಲಾಖೆ ಸಂಬಂಧಿತರೊಂದಿಗೆ ಚರ್ಚಿಸಿ ನಿರ್ಧರಿಸಿ ಎಂದು ಸಲಹೆ ನೀಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾತನಾಡಿ, ಕೊರಗ ಸಮುದಾಯ ಅರಣ್ಯಕ್ಕೆ ಹೊಂದಿಕೊಂಡು ಇದ್ದಾರೆ. ಭಾಗಶಃ ಡೀಮ್ಡ್ ಜಾಗಕ್ಕೆ ಹಕ್ಕು ಪತ್ರ ನೀಡಲು 2ನೇ ಪರಿಣಿತರ ಸಮಿತಿ ತಿಳಿಸಿದೆ. ಮೊದಲಿಗೆ ಸರ್ವೇ ಕಾರ್ಯಗಳನ್ನು ಮುಗಿಸಿ ಅಗತ್ಯ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ಡೀಮ್ಡ್ ಸಮಸ್ಯೆ ಕೊರಗರಿಗೆ ಮಾತ್ರವೇ? ಹಣವಂತರಿಗೆ ಇಲ್ಲವೇ? ಸಣ್ಣ ಭೂಮಿ ಕೇಳುವ ನಮ್ಮ ಸಮುದಾಯಕ್ಕೆ ಡೀಮ್ಡ್ ಎನ್ನುವ ಕಾರಣ ಹೇಳುವ ಅಧಿಕಾರಿಗಳು ಉಳ್ಳವರು ಅದೇ ಭೂಮಿಯಲ್ಲಿ ತೋಟ ಮಾಡುವಾಗ ಕಾಣದಂತೆ ಇರುತ್ತಾರೆ ಎಂದು ಕೊರಗ ಮಹಿಳೆ ಗಿರಿಜಾ ಹೇಳಿದರು.

ಮುಖಂಡರಾದ ಗಣೇಶ ಕುಂದಾಪುರ, ಕುಮಾರದಾಸ್ ಹಾಲಾಡಿ, ನಾಗರಾಜ್ ಕೊರಗ ಕುಂದಾಪುರ, ಪ್ರಭಾಕರ ವಿ. ಮೊದಲಾದವರು ಸಮುದಾಯದ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ, ಐಟಿಡಿಪಿ ಉಡುಪಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ, ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ತಾಪಂ ಇಒ ಶಶಿಧರ್ ಕೆ.ಜಿ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಕಚೇರಿ ಅಧೀಕ್ಷಕ ರಮೇಶ್ ಮೊದಲಾದವರು ಉಪಸ್ಥಿತದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News