×
Ad

ಆರೋಪಗಳು ಸುಳ್ಳೆಂದು ದೇವಸ್ಥಾನದಲ್ಲಿ ಪ್ರಮಾಣ ಮಾಡಿ: ಶಾಸಕ ಸುನೀಲ್ ಕುಮಾರ್‌ಗೆ ಶುಭದ ರಾವ್ ಸವಾಲು

Update: 2023-10-24 17:09 IST

ಸುನೀಲ್ ಕುಮಾರ್‌ - ಶುಭದ ರಾವ್

ಉಡುಪಿ : ಪರಶುರಾಮನ ಪ್ರತಿಮೆಯ ವಿಚಾರವಾಗಿ ಕಾರ್ಯಕರ್ತರ ಸಭೆಯಲ್ಲಿ ಶಾಸಕರು ನೀಡಿದ ಹೇಳಿಕೆ ಸಮರ್ಥನೆಯೇ ಹೊರತು ಅದೇ ಸತ್ಯವಲ್ಲ. ಮಾಡಿದ ಆರೋಪಗಳು ಸುಳ್ಳೆಂದು ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಸಾಬೀತುಪಡಿಸಿದರೆ ನಾನು ಕ್ಷಮೆ ಕೇಳಿ ರಾಜಕೀಯ ನಿವೃತ್ತಿಯಾಗುತ್ತೇನೆ. ಅಂದೇ ನಮ್ಮ ನಡುವಿನ ರಾಜಕೀಯ ಸಂಘರ್ಷ ಕೊನೆಯಾಗುತ್ತದೆ. ಪ್ರಮಾಣ ಮಾಡುವ ಸ್ಥಳ, ಸಮಯ, ದಿನಾಂಕವನ್ನು ನೀವೇ ನಿರ್ಧರಿಸಿ ಎಂದು ಶಾಸಕ ಸುನೀಲ್ ಕುಮಾರ್‌ಗೆ ಕಾರ್ಕಳ ಪುರಸಭಾ ಸದಸ್ಯ, ಕಾಂಗ್ರೆಸ್ ವಕ್ತಾರ ಶುಭದ ರಾವ್ ಸವಾಲು ಹಾಕಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಪರಶುರಾಮನ ಪ್ರತಿಮೆ ಬಗ್ಗೆ ಸುನೀಲ್ ಕುಮಾರ್ ನೀಡಿದ ಸಮರ್ಥನೆ ಸುಳ್ಳಿನಿಂದ ಕೂಡಿದೆ. ಭಾಷೆಯ ಎಲ್ಲೆ ಮೀರಿ ಆಡಿದ ಅಸಭ್ಯ ಮತ್ತು ಅವಹೇಳನ ಮಾತುಗಳಿಂದ ಏನೂ ಸಾಧಿಸಿದಂತೆ ಆಗುವುದಿಲ್ಲ. ಧರ್ಮದ ದುರ್ಬಳಕೆಯೇ ಭಿಕ್ಷೆ ಬೇಡುವ ಪರಿಸ್ಥಿತಿಗೆ ತರುತ್ತದೆ ಎಂಬುದು ಶಾಸಕರ ಮಾತಿನಿಂದ ಸಾಬೀತಾಗಿದೆಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ತನ್ನ ಮೇಲೆ ಬಂದ ಆರೋಪಗಳನ್ನು ಕಾರ್ಯಕರ್ತರ ಸಭೆ ಕರೆದು ಅವರ ಮುಂದೆ ಹೇಳುವ ದುಸ್ಥಿತಿಗೆ ಬಂದಿರುವುದು ನಮ್ಮ ದುರಂತ. ಅವರ ಮೇಲೆ ಮಾಡಿದ ಅರೋಪಗಳಲ್ಲಿ ಒಂದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿರುವ ಅವರು ದೇಗುಲದಲ್ಲಿ ಪ್ರಮಾಣಕ್ಕೆ ಬರುವ ಮೂಲಕ ಆರೋಪ ಗಳೆಲ್ಲವೂ ಸುಳ್ಳೆಂದು ಸಾಬೀತುಪಡಿಸಲು ಒಳ್ಳೆಯ ಅವಕಾಶವಿದೆ. ಸವಾಲನ್ನು ಸ್ವೀಕರಿಸಲಿ ಇಲ್ಲವಾದಲ್ಲಿ ತಪ್ಪನ್ನು ಒಪ್ಪಿಕೊಂಡಂತೆ ಎಂದು ಅವರು ಹೇಳಿದ್ದಾರೆ.

ವಿಡಿಯೋವೊಂದರಲ್ಲಿರುವುದು ಪ್ರತಿಮೆ ಸ್ಥಾಪನೆ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದೇ ಅಥವಾ ಪ್ರತಿಮೆ ತೆರವು ಗೊಳಿಸುವಾಗ ಚಿತ್ತೀಕರಣ ಮಾಡಿದ್ದೆ? ಈ ವಿಡಿಯೋದಲ್ಲಿ ದಾಖಲಾಗಿರುವಂತೆ ಕೈನ್ ಮೂಲಕ ಎತ್ತಿದ ಪರಶುರಾಮನ ಎದೆಯ ಮೇಲಿನ ಭಾಗ ಕಂಚಿನದ್ದೇ? ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದ ಪರಶುರಾಮನ ಪ್ರತಿಮೆ ಸಂಪೂರ್ಣ ಕಂಚಿನದ್ದೇ? ಪ್ರತಿಮೆಯ ಮೇಲ್ಭಾಗ ತೆರವು ವಿಚಾರವಾಗಿ ಜಿಲ್ಲಾಡಳಿತ, ಪೊಲೀಸ್, ಮತ್ತು ನಿರ್ಮಿತಿ ಕೇಂದ್ರದ ಮೇಲೆ ತಾವು ಒತ್ತಡ ಹೇರಲಿಲ್ಲವೇ? ಕಾಂಗ್ರೆಸ್ ಅನುದಾನ ತಡೆ ಹಿಡಿದಿದೆ ಎಂದ ಹೇಳಿದ ತಮ್ಮ ಆರೋಪ ಸರಿಯೇ? ಎಂದು ಪ್ರಶ್ನಿಸಿರುವ ಸುಭದ ರಾವ್, ಈ ಎಲ್ಲ ಸವಾಲುಗಳಿಗೆ ತಾವು ದೇಗುಲದಲ್ಲಿ ಪ್ರಮಾಣ ಮಾಡಿ ಸಾಬೀತುಪಡಿಸಬೇಕು ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News