×
Ad

ರಾಜ್ಯ ಸರಕಾರದಿಂದ ತೆರಿಗೆ ಭಯೋತ್ಪಾದನೆ: ಶಾಸಕ ಸುನೀಲ್ ಕುಮಾರ್ ಆರೋಪ

Update: 2025-08-30 18:25 IST

ಉಡುಪಿ, ಆ.30: ರಾಜ್ಯ ಕಾಂಗ್ರೆಸ್ ಸರಕಾರ ಚಂಬಲ್ ಕಣಿವೆಯ ದರೋಡೆಕೋರರನ್ನು ಮೀರಿಸುವ ರೀತಿಯಲ್ಲಿ ಜನಸಾಮಾನ್ಯರ ಸುಲಿಗೆಗೆ ನಿಂತಿದೆ. ರಾಜ್ಯ ಸರಕಾರ ತೆರಿಗೆ ಭಯೋತ್ಪಾದನೆ ಮೂಲಕ ವಾರ್ಷಿಕ 56 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್, ಪಾರ್ಕಿಂಗ್ ಟ್ಯಾಕ್ಸ್, ನೀರಿನ ದರ ಹೆಚ್ಚಳ ಸೇರಿದಂತೆ ಹತ್ತಾರು ರೀತಿಯಲ್ಲಿ ತೆರಿಗೆ ಭಯೋತ್ಪಾದನೆ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರ ಗಣೇಶ ಹಬ್ಬದ ಸಂಭ್ರಮದ ಮರುದಿನವೇ ದಸ್ತಾವೇಜುಗಳ ನೋಂದಣಿ ಹಾಗೂ ಮುದ್ರಾಂಕ ಶುಲ್ಕವನ್ನು ಶೇ.1ರಿಂದ ಶೇ.2ಕ್ಕೆ ಏರಿಸಿದೆ. ಸೋಮವಾರದಿಂದ ಇದು ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಅದೇ ರೀತಿ ಮಂಗಳೂರು ವಿಶ್ವವಿದ್ಯಾಲಯದ ಪಿಜಿ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಕಾಂಗ್ರೆಸ್ ಸರಕಾರದ ದರ ಏರಿಕೆಯ ಬರೆಯಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲದಂಥ ಸ್ಥಿತಿ ನಿರ್ಮಾಣ ವಾಗಿದೆ ಎಂದು ಅವರು ದೂರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಯ್ಯಾಪೈಸೆಯಷ್ಟು ಅಭಿವೃದ್ಧಿಯಾಗಿಲ್ಲ, ಗುಂಡಿ ಬಿದ್ದ ರಸ್ತೆ ಮುಚ್ಚಲಾಗುತ್ತಿಲ್ಲ, ಸೋರುತ್ತಿರುವ ಶಾಲಾ ಮಾಳಿಗೆಗಳಿಗೆ ಸೂರಿಲ್ಲ, ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲೂ ಹಗರಣ, ಬಾಣಂತಿಯರಿಗೆ ನೀಡುವ ಪೌಷ್ಠಿಕ ಆಹಾರದಲ್ಲೂ ಹಗರಣ, ಕಾರ್ಮಿಕ ಕಿಟ್‌ನಲ್ಲೂ ಗೋಲ್ ಮಾಲ್ ಎಂದು ಅವರು ಆರೋಪಿಸಿದ್ದಾರೆ.

ಅಭಿವೃದ್ಧಿ ವಿಚಾರ ರಾಜ್ಯದಲ್ಲಿ ಸತ್ತೇ ಹೋಗಿದ್ದು, ಸರ್ಕಾರ ಸಲ್ಲದ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ. ಧರ್ಮಸ್ಥಳದ ವಿರುದ್ಧ ಎಡಚರು ನಡೆಸಿದ ಷಡ್ಯಂತ್ರ, ಮೈಸೂರು ದಸರಾ ಉದ್ಘಾಟನೆಗೆ ಅನ್ಯಮತೀಯರಿಗೆ ಆಹ್ವಾನ ಇತ್ಯಾದಿ ಸಂಗತಿಗಳನ್ನು ಮುಂದೆ ಬಿಟ್ಟು ಜನರ ಸಮಸ್ಯೆಯನ್ನು ಹತ್ತಿಕ್ಕುವುದೇ ಸಿದ್ದರಾಮಯ್ಯ ಸರ್ಕಾರದ ನಿತ್ಯ ಕಾಯಕವಾಗಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News