ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆಗೆ ಮೂರು ಕಾರಣ ಕೊಟ್ಟ ಆರೋಪಿ: ಎಸ್ಪಿ ಡಾ. ಅರುಣ್
(ಬಂಧಿತ ಆರೋಪಿ ಪ್ರವೀಣ್ - ಎಸ್ಪಿ ಡಾ. ಅರುಣ್)
ಉಡುಪಿ: ನೇಜಾರಿನಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದ ಆರೋಪಿ ಪ್ರವೀಣ್ ಅರುಣ್ ಚೌಗಲೆ(39) ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾಂತ್ರಿಕ ಹಾಗೂ ಇತರ ಸಾಕ್ಷ್ಯಾಧಾರಗಳಿಂದ ಈತನೆ ಕೊಲೆ ಮಾಡಿರುವುದು ದೃಢಪಟ್ಟಿದೆ. ಕೃತ್ಯಕ್ಕೆ ಬಳಸಿದ ಆಯುಧವನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಾಗಿದೆ ಎಂದರು.
ಮಂಗಳೂರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಮೆಂಬರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರವೀಣ್ ಗಗನಸಖಿ ಐನಾಝ್ ಮೇಲೆ ದ್ವೇಷದಲ್ಲಿ ಈ ಕೊಲೆ ಮಾಡಿದ್ದಾನೆ. ತಡೆಯಲು ಬಂದ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಕೂಡ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಅವರು ಹೇಳಿದರು.
ವಿಚಾರಣೆ ವೇಳೆ ಆರೋಪಿ ಕೊಲೆಗೆ ಮೂರು ಉದ್ದೇಶಗಳನ್ನು ತಿಳಿಸಿದ್ದು, ಅದನ್ನು ಪರಿಶೀಲನೆ ನಡೆಸಿ ದೃಢಪಡಿಸಲಾಗು ವುದು. ವಿವಾಹಿತನಾಗಿರುವ ಆರೋಪಿ, ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸ ಮಾಡುತ್ತಿದ್ದಾನೆ ಎಂದು ಎಸ್ಪಿ ತಿಳಿಸಿದರು.